ರಾಜ್ಯ

ರಸ್ತೆ ಅಪಘಾತದಲ್ಲಿ 2 ಸಾವು: ರಕ್ತಸ್ರಾವಕ್ಕೆ ಸಂತ್ರಸ್ತನ ಬಲಿ, ವಿಡಿಯೋ ಖಯಾಲಿಗೆ ಕೊನೆಯುಸಿರೆಳೆದ ಮಾನವಿಯತೆ

Srinivas Rao BV
ಬೆಂಗಳೂರು: ಮೈಸೂರು ರಸ್ತೆ ಮೇಲ್ಸೇತುವೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಕ್ತಸ್ರಾವದಿಂದ ಸಂತ್ರಸ್ತ ಸಾವನ್ನಪ್ಪಿದರೆ, ವಿಡಿಯೋ ಮಾಡುವ ಜನಗಳ ಖಯಾಲಿಗೆ ಮಾನವಿಯತೆಯೂ ಸ್ಥಳದಲ್ಲೇ ಅಸುನೀಗಿದೆ. 
ಕಂಡ ಕಂಡಲ್ಲಿ ಸೆಲ್ಫಿ ತೆಗೆದು, ವಿಡಿಯೋ ಮಾಡುವ ಕೆಟ್ಟ ಖಯಾಲಿಗೆ ಮನುಷ್ಯ ತನ್ನ ಸಾಮಾಜಿಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾನಾ ಎಂಬ ಗಂಭೀರ ಪ್ರಶ್ನೆ ಹುಟ್ಟುಹಾಕುವಂತಿದೆ ಈ ಪ್ರಕರಣದ ವರದಿ.  ಕೆಎಸ್ ಆರ್ ಟಿಸಿಯ ಭದ್ರತಾ ಸಿಬ್ಬಂದಿ ಸಿದ್ದು ಹೂಗಾರ್ (25) ರಸ್ತೆ ಅಪಘಾತಕ್ಕೀಡಾಗಿ ರಕ್ತಸ್ರಾವದಿಂದ ಬಳಲುತ್ತಿದ್ದರೆ, ನೆರೆದಿದ್ದ ಸ್ಥಳಿಯರು ಸ್ಮಾರ್ಟ್ ಫೋನ್ ನಿಂದ ಆಂಬುಲೆನ್ಸ್ ಗೆ ಕರೆ ಮಾಡಿ ಅಪಘಾತದ ಸಂತ್ರಸ್ತರನ್ನು ಬದುಕಿಸಲು ಯತ್ನಿಸುವ ಬದಲು ಫೋಟೊ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದರು.   
ಮೇಲ್ಸೇತುವೆಯಲ್ಲಿ ರಸ್ತೆ ಅಪಘಾತ ಉಂಟಾಗಿದ್ದರೂ 70-100 ಜನರು ಅಲ್ಲಿ ನೆರೆದಿದ್ದರು, ಆದರೆ ಯಾರೊಬ್ಬರೂ ಸಹಾಯಕ್ಕೆ ನೆರವಾಗದೇ ಜೇಬಿನಿಂದ ಮೊಬೈಲ್ ತೆಗೆದು ಸಹಾಯಕ್ಕಾಗಿ ಬೇಡುತ್ತಿದ್ದ ಸಂತ್ರಸ್ತನ ಆಕ್ರಂದನವನ್ನು ವಿಡಿಯೋಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮುಕ್ತಾಯಗೊಳ್ಳುತ್ತಿದ್ದ ಜನರಿಗೆ ಟ್ರಾಫಿಕ್ ಪೊಲೀಸರು ಬರುವವರೆಗೂ  ಆತನನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಇರಲಿಲ್ಲ.  ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಹೇಳಿಕೆ ಪ್ರಕಾರ, ಕೇವಲ 10 ನಿಮಿಷಗಳ ಮೊದಲು ಆಸ್ಪತ್ರೆಗೆ ಕರೆತಂದಿದ್ದರೂ ಸೂಕ್ತ ಚಿಕಿತ್ಸೆಯಿಂದ ಆತ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು. 
ಬೆಳಿಗ್ಗೆ 9:15ಕ್ಕೆ ಶಾಂತಿನಗರದ ಟಿಟಿಎಂಸಿಯಿಂದ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಸಿದ್ದು ಹೂಗಾರ್ ಗೆ ಡಿಕ್ಕಿ ಹೊಡೆದಿದೆ, ರಭಸಕ್ಕೆ ಪ್ಯಾರಾಪಟ್ ಗೋಡೆಗೆ ಜಜ್ಜಿ ರಕ್ತಸ್ರಾವ ಪ್ರಾರಂಭವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ಟ್ರ್ಯಾಕ್ಟರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸಂತ್ರಸ್ತನಿಗೆ ಸಹಾಯ ಮಾಡುವುದರ ಬದಲು ಫೋಟೊ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದ ಜನರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆ ನಂತರವಷ್ಟೇ ಅರೆಜೀವವಾಗಿದ್ದ ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. 
SCROLL FOR NEXT