ಚಿಕ್ಕಮಗಳೂರು: ಅಪಘಾತವಾದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಅಂಬ್ಯುಲೆನ್ಸ್ ಚಾಲಕ
ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ರಸ್ತೆ ಬದಿಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಖಾಸಗಿ ಅಂಬ್ಯುಲೆನ್ಸ್ ಚಾಲಕನೊಬ್ಬ ಮಾನವೀಯತೆ ಮೆರೆದಿದ್ದಾನೆ.
ಚಿಕ್ಕಮಗಳೂರು-ಹಾಸನ ಮಾರ್ಗದ ಕುಪ್ಪಳ್ಳಿ ಸಮೀಪ ಈ ಘಟನೆ ನಡೆದಿದೆ. ಚಿಕ್ಕಮಗಳೂರಿನಿಂದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ಚಾಲಕ ಜಿಶಾನ್ ಅಸಾದ್ ಹಾಸನ ಸಮೀಪದ ಕುಪ್ಪಳ್ಳಿಗೆ ತಲುಪಿದ್ದಾಗ ಅಲ್ಲಿ ಎಸ್‍ಆರ್ ಟಿಸಿ ಬಸ್ ಮತ್ತು ಮಿನಿ ಟೆಂಪೋ ನಡುವೆ ಡಿಕ್ಕಿಯಾಗಿ ನಾಲ್ವರು ಗಾಯಾಳುಗಳು ರಸ್ತೆ ಬದಿಯಲ್ಲೇ ನರಳುತ್ತಿರುವುದನ್ನು ಕಂಡಿದ್ದಾನೆ.
ತಕ್ಷಣ ಜಾಗೃತನಾದ ಅಂಬ್ಯುಲೆನ್ಸ್ ಚಾಲಕ ಆ ನಾಲ್ವರೂ ಅಪರಿಚಿತರನ್ನು ಅಂಬ್ಯುಲೆನ್ಸ್ ಗೆ ಹತ್ತಿಸಿಕೊಂಡಿದ್ದು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾನೆ. ತನ್ನದು ಖಾಸಗಿ ಅಂಬ್ಯುಲೆನ್ಸ್ ಆಗಿದ್ದರೂ ಇದಕ್ಕಾಗಿ ಆತ ಅವರಿಂದ ಹಣವನ್ನೇನೂ ಸ್ವೀಕರಿಸಲಿಲ್ಲ ಎನ್ನುವುದು ಗಮನಾರ್ಹ.
ಮೂಲತಃ ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿಯಾದ ಜಿಶಾನ್ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.