ಕ್ರಿಮಿನಲ್ ಕೇಸ್: 11 ದಿನಗಳಲ್ಲೇ ತೀರ್ಪು ಪ್ರಕಟಿಸಿ ಚಿತ್ರದುರ್ಗ ಕೋರ್ಟ್ ನಿಂದ ಇತಿಹಾಸ ಸೃಷ್ಟಿ!
ಚಿತ್ರದುರ್ಗ: ಚಿತ್ರದುರ್ಗ ಪ್ರಧಾನ ಹಾಗು ಸತ್ರ ನ್ಯಾಯಾಲಯವು ಶನಿವಾರ ನೂತನ ಇತಿಹಾಸವನ್ನು ಸೃಷ್ಟಿಸಿದೆ. ಕೊಲೆ ಪ್ರಕರಣವೊಂದರ ಸಂಬಂಧ ಕೇವಲ ಹನ್ನೊಂದು ದಿನಗಳ ವಿಚಾರಣೆ ನಡೆಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹನ್ನೊಂದು ದಿನಗಳ ಹಿಂದೆ ಪತ್ನಿಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಪತಿಯೊಬ್ಬನಿಗೆ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಚಳ್ಳಕೆರೆ ತಾಲೂಕು ವಲಸೆ ಗ್ರಾಮದ ಪರಮೇಶ್ವರಪ್ಪ ಸ್ವಾಮಿ(75) ತನ್ನ ಪತ್ನಿ ಪುಟ್ಟಮ್ಮ(65) ಶೀಲ ಶಂಕಿಸಿದ್ದು ಆಕೆ ಮಲಗಿರುವಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದನು. ಜೂನ್ 27ರಂದು ಈ ಹತ್ಯೆ ನಡೆದಿತ್ತು.
ಪ್ರಕರಣ ಸಂಬಂಧ ಪುಟ್ಟಮ್ಮ ಅವರ ಪುತ್ರ ಸೇರಿ 17 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ಮುಗಿಸಿದೆ. ಮತ್ತು ಹನ್ನೊಂದು ದಿನಗಳಲ್ಲಿಯೇ ಶಿಕ್ಷೆ ಪ್ರಕಟಿಸಿದೆ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಶೀಘ್ರವಾಗಿ ಇತ್ಯರ್ಥವಾದ ಮೊದಲ ಕ್ರಿಮಿನಲ್ ಪ್ರಕರಣ ಇದೆನ್ನುವ ಕೀರ್ತಿಗೆ ಪಾತ್ರವಾಗಿದೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ನಡೆಇದಿದ್ದ ಘಟನೆಯೊಂದರಲ್ಲಿ 23 ದಿನಗಳ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದ್ದದ್ದು ದಾಖಲೆಯಾಗಿತ್ತು.