ರಾಜ್ಯ

ಬೆಂಗಳೂರು: ನೆಟ್ ಪರೀಕ್ಷಾರ್ಥಿಗಳ ತಾಳಿ, ಕಾಲುಂಗುರ ತೆಗೆಸಿದ ಸಿಬ್ಬಂದಿ, ಧಾರ್ಮಿಕ ಭಾವನೆಗೆ ಧಕ್ಕೆ,

Raghavendra Adiga
ಬೆಂಗಳೂರು: ಪರೀಕ್ಷೆ ಬರೆಯಬಯಸುವ ವಿವಾಹಿತ ಮಹಿಳೆಯರು ಮಾಂಗಲ್ಯ ಸರ, ಕಾಲುಂಗುರ ಕಳಚಿಡಬೇಕು ಇಲ್ಲವಾದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಿ ತಾಳಿ, ಕಾಲುಂಗುರ ತೆಗೆಸಿದ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ - ನೆಟ್  ಬರೆಯಲಿಕ್ಕಾಗಿ ಜೆಪಿನಗರದ ಬ್ರಿಗೇಡ್‌ ಸ್ಕೂಲ್‌ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮಹಿಳೆಯರ ತಾಳಿ, ಕಾಲುಂಗುರ, ಬುರ್ಖಾಗಳನ್ನು ಅವರ ಪತಿಯ ಎದುರಿಗೇ ತೆಗೆಸಿದ್ದಾರೆ.  ಪರೀಕ್ಷಾ ಪರಿವೀಕ್ಷಕರು ವಿಧಿಸಿದ ಈ ಕಠಿಣ ನಿಬಂಧನೆಯಿಂದ ಮಹಿಳೆಯರು  ತೀವ್ರ ನೊಂದುಕೊಂಡಿದ್ದಾರೆ.
ಈ ವಿಚಿತ್ರ ನಿಬಂಧನೆ ಕಾರಣ ಕೆಲ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ಹಿಂತಿರುಗಿದ್ದರೆ ಇನ್ನು ಕೆಲವರು ಶಾಲಾ ಆಡಳಿತ ಮಂಡಳಿಯಲ್ಲಿ  ಈ ಕುರಿತು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಕಡೆಗೆ ತಾಳಿ, ಕಾಲುಂಗುರವನ್ನು ಕಳಚಿ ಪತಿಯ ಕೈಲಿಟ್ಟು ತಾವು ಪರೀಕ್ಷೆಗೆ ಕುಳಿತಿದ್ದಾರೆ.
ನಮ್ಮ ನಂಬಿಕೆ ಮತ್ತು ಧರ್ಮಕ್ಕೆ ವಿರುದ್ಧವಾದುದ್ದನ್ನು ಮಾಡಿಸಿ ನಮಗೆ ನೋವು ಕೊತ್ಟಿದ್ದಾರೆ. ಹಿಂದೂ ಮಹಿಳೆಯರ ಕಾಲುಂಗುರ, ತಾಳಿ, ಮುಸ್ಲಿಮ್ ಮಹಿಳೆಯರ ಬುರ್ಖಾ ತೆಗೆಸಿ ಪರೀಕ್ಷೆಗೆ ಕೂರಿಸಿದ್ದು ಸರಿಯಲ್ಲ. ಮೊಬೈಲ್, ಪರ್ಸ್ ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಆದರೆ ತಾಳಿ ಮತ್ತು ಕಾಲುಂಗುರ ತೆಗೆಯುವಂತೆ ಪರೀಕ್ಷಾ ನಿಯಮ ಎಲ್ಲಿಯೂ ಇಲ್ಲ ಎಂದು ಅಭ್ಯರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
SCROLL FOR NEXT