ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು; ಸಣ್ಣಪುಟ್ಟ ಸಮಸ್ಯೆಗಳನ್ನು ಹಿಡಿದು ನಗರಕ್ಕೆ ಬರುವ ಜನರ ಸಮಸ್ಯೆಗಳನ್ನು ಆಲಿಸಲು ಪ್ರತೀ ವಾರ ಜನತಾದರ್ಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ.
ಪ್ರತೀ ವಾರ ಜತನಾ ದರ್ಶನ ನಡೆಸುವಂತೆ ಈಗಾಗಲೇ ಎಲ್ಲಾ ಡಿಸಿ ಕಚೇರಿಗಳಿಗೆ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ವಾರದಲ್ಲಿ ಒಂದು ದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಜನತಾದರ್ಶನಕ್ಕೆ ಸಾಲ ಮಾಡಿ ದೂರದ ಊರುಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಸಮಸ್ಯೆಗಳು ಬಗೆಹರಿಯದೇ ಹೋದರೆ, ಬಳಿಕ ಆ ಸಮಸ್ಯೆಗಳು ನನ್ನ ಬಳಿ ಬರಲಿ. ಜಿಲ್ಲಾಧಿಕಾರಿಗಳು ವಾರದಲ್ಲಿ ಒಂದು ದಿನ ಜನರ ಸಮಸ್ಯೆಗಳನ್ನು ಆಲಿಸಲೇಬೇಕು. ಯಾವ ರೀತಿ ಜನ ಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಾರೆಂಬುದರ ಕುರಿತ ಮಾಹಿತಿಗಳನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಿಗೆ ನೀಡಬೇಕು.
ಈ ಕುರಿತು ಪ್ರಧಾನ ಕಾರ್ಯದರ್ಶಿಗಳಿಗೆ ಉಸ್ತುವಾರಿ ನೀಡಲಾಗಿದ್ದು. ಅವರೇ ಜಿಲ್ಲೆಗಳಿಗೆ ಹೋಗಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಹೂಡಿ, ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಮುಖ್ಯಕಾರ್ಯದರ್ಶಿಗಳಿಗೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಉದ್ಯೋಗ ಹರಿಸಿ ಜನತಾದರ್ಶನಕ್ಕೆ ಬರುವ 250 ಜನರಿಗೆ ಉದ್ಯೋಗಾವಕಾಶವನ್ನು ನೀಡಲಾಗುತ್ತದೆ. ಮೊದಲ ಹಂತವಾಗಿ 250 ಯುವಕರಿಗೆ ಉದ್ಯೋಗವನ್ನು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ನೀಡಲಾಗುತ್ತದೆ. ಅಂಗವಿಕಲರು, ಆರೋಗ್ಯ ಸಮಸ್ಯೆಗಳಿರುವವರು, ಬಿಇ, ಎಂಟೆಕ್ ಪದವೀಧರರು ಸೇರಿದಂತೆ ಎಲ್ಲಾ ರೀತಿಯ ಯುವಕರಿಗೂ ಉದ್ಯೋಗವಕಾಶವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.