ಕಾಸರಗೋಡು: ಲಾರಿ ಹಾಗು ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಪ್ಪಳದ ನಯಾಬಜಾರ್ ನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಉಪ್ಪಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಜೀಪಿನಲ್ಲಿದ್ದ ಮೂವರು ಮಹಿಳೆಯರು, ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀಫಾತಿಮ್ಮ (65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್ (35) ಮೃತರು.
ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದ್ದು, ಜೀಪಿನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು,ಇನ್ನು 20 ಕಿಮೀ ಪ್ರಯಾಣಿಸಿದ್ದರೇ ಮೃತರು ತಮ್ಮ ಗ್ರಾಮ ತಲುಪುತ್ತಿದ್ದರು.
ಜೀಪ್ ನ ಟೈರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಮಂಜೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಜೀಪಿನಲ್ಲಿದ್ದ 7 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.