ಬೆಂಗಳೂರು: ಪೂರ್ಣ ಸಾಲ ಮನ್ನಾ ಮಾಡಿ; ರೈತರ ಪ್ರತಿಭಟನೆ
ಬೆಂಗಳೂರು; ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಘೋಷಣೆ ಕೂಗುತ್ತಾ ರೈತರು ಸ್ವಾತಂತ್ರ್ಯ ಉದ್ಯಾನದಿಂದ ಮೌಲ್ಯ ವೃತ್ತದ ಗಾಂಧಿ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಗಳೂ ಕೂಡ ನಡೆದವು. ಈ ವೇಳೆ ಪೊಲೀಸರು ಕೆಲವರನ್ನು ಬಂಧನಕ್ಕೊಳಪಡಿಸಿದರು.
ಪ್ರತಿಭಟವೆ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದ್ದಾರೆ.
ಅಧಿಕಾರಕ್ಕೆ ಬಂದ ಬಳಿಕ ರೂ.53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿ ಇದೀಗ ಹಿಂದೆ ಸರಿದಿದ್ದಾರೆ. ಈಗ ಕೇವಲ ರೂ.34 ಸಾವಿರ ಕೋಟಿಯಷ್ಟು ಸುಸ್ತಿ ಸಾಲ ಮನ್ನಾ ಮಾಡಿದ್ದು, ಇದರಿಂದ ಎಲ್ಲಾ ರೈತರಿಗೆ ನ್ಯಾಯ ದೊರಕಿಲ್ಲ ಎಂದು ಆರೋಪಿಸಿದರು.
ಸಂಜೆ ವೇಳೆ ರೈತರನ್ನು ಭೇಟಿ ಮಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು, ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸುತ್ತೇನೆ, ಸಾಲ ಮನ್ನಾ ಕುರಿತು ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಬರಲಿದ್ದು, ಅದರ ಪ್ರಕಾರ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂಬ ಭರವಸೆಯನ್ನು ನೀಡಿದರು. ಈ ಹಿನ್ನಲೆಯಲ್ಲಿ ರೈತರು ತಮ್ಮ ಪ್ರತಿಭಟನೆಗಳನ್ನು ಹಿಂದಕ್ಕೆ ಪಡೆದರು.