ರಾಜ್ಯ

ಎಸ್ಐ ಹುದ್ದೆ ಕೊಡಿಸುವುದಾಗಿ ರೂ.14 ಕೋಟಿ ವಂಚನೆ: ಎಸ್'ಪಿ ಸೇರಿ 4 ಜನರ ಬಂಧನ

Manjula VN
ಬೆಂಗಳೂರು; ಸರ್ಕಾರಿ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ರೂ.14 ಕೋಟಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎಸ್'ಪಿ ಸೇರಿದಂತೆ ಮೂವರು ಪೊಲೀಸ್ ಪೇದೆಗಳನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಬಂಧತರನ್ನು ನೇಮಕಾತಿ ವೇಭಾಗ ಎಸ್'ಪಿ ರಾಜೇಶ್ (48), ಹಲವು ಡಿಜಿಪಿಗಳಿಗೆ ಪಿಎ ಆಗಿದ್ದ ನಾಗರಾಜ್ (62), ನಗರ ಸಶಸ್ತ್ರ ಮೀಸಲು ಪಡೆದ ಪೇದೆ ಲಕ್ಶೀಕಾಂತ್, ಉಪ್ಪಾರ ಪೇಟೆ ಸಂಚಾರಿ ಪೊಲೀಸ್ ಠಾಣೆ ಮಹಿಳಾ ಮುಖ್ಯ ಪೇದೆ ಶಬೀನಾ ಬೇಗಂ ಎಂದು ಗುರ್ತಿಸಲಾಗಿದೆ. 
ಎಡಿಜಿಪಿ (ನೇಮಕಾತಿ ಮತ್ತು ತರಬೇತಿ) ರಾಘವೇಂದ್ರ ಹೆಚ್ ಔರಾದ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದರು. ಪಿಎಸ್ಐ ಪರೀಕ್ಷಾ ಆಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವುದಾಗಿ ಕೆಲವರು ವಂಚನೆ ಮಾಡುತ್ತಿದ್ದಾರೆ, ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆ ಸಿಸಿಬಿ ತನಿಖೆಗೆ ವಹಿಸಿತ್ತು. ತನಿಖೆ ಮುಂದಾದ ಸಿಸಿಬಿ ತಂಡವನ್ನು ರಚನೆ ಮಾಡಿತ್ತು. ತನಿಖೆ ವೇಳೆ ವಂಚನೆ ಮಾಡುತ್ತಿರುವುದು ಸಾಬೀತಾಗಿತ್ತು. ಇದರಂತೆ ಎಸಿಪಿಯವರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಾಲ್ವರನ್ನು ಬಂಧನಕ್ಕೊಳಪಡಿಸಿದರು. 
ನಾವು ಪೊಲೀಸ್ ಇಲಾಖೆಯಲ್ಲಿಯೇ ಇರುವುದರಿಂದ ಪಿಎಸ್ಐ ಹುದ್ದೆ ಕೊಡಿಸುತ್ತೇವೆಂದು ನಾಲ್ವರು ಆಕಾಂಕ್ಷಿಗಳಿಗೆ ಭರವಸೆಗಳನ್ನು ನೀಡುತ್ತಿದ್ದರು. ಶಬಾನಾ ಅವರು ಐಎಎಸ್ ಅಧಿಕಾರಿ ಎಂಬಂತೆ ಬಿಂಬಿಸಿದ್ದರು. ಆಕಾಂಕ್ಷಿಗಳು ಆಗಾಗ ಶಬಾನಾ ಜೊತೆಗೆ ಸಭೆ ನಡೆಸಿ ಮಾತುಕತೆ ನಡೆಸುವಂತೆ ಮಾಡುತ್ತಿದ್ದರು. ಸಭೆಯಲ್ಲಿ ಆಕಾಂಕ್ಷಿಗಳಿಗೆ ಶಬಾನಾ ಉದ್ಯೋಗ ಕೊಡಿಸುವ ಖಾತರಿಯನ್ನು ನೀಡುತ್ತಿದ್ದರು. ಹಣ ಪಡೆಯುತ್ತಿದ್ದ ಪೇದೆಗಳು ಆಕಾಂಕ್ಷಿಗಳಿಗೆ ಶಬಾನಾ ಸೇರಿ ಇತರರಿಗೂ ಹಣ ನೀಡಬೇಕೆಂದು ಹೇಳುತ್ತಿದ್ದರು. ಪ್ರತೀಯೊಬ್ಬ ಉದ್ಯೋಗ ಆಕಾಂಕ್ಷಿಯ ಬಳಿಯೂ ರೂ.30-35 ಲಕ್ಷ ಪಡೆಯುತ್ತಿದ್ದರು. ಈ ವರೆಗೂ ಈ ತಂಡ 30-40 ಜನರಿಗೆ ವಂಚನೆ ಮಾಡಿದೆ ಎಂದು ಸಿಸಿಬಿ ಆಧಿಕಾರಿಗಳು ಹೇಳಿದ್ದಾರೆ. 
SCROLL FOR NEXT