ರಾಜ್ಯ

ಬೆಂಗಳೂರು: ಶಾಲಾ ವಾಹನ ಡಿಕ್ಕಿ, ಮಗನ ಎದುರೇ ಮಹಿಳೆಯ ದುರ್ಮರಣ

Raghavendra Adiga
ಬೆಂಗಳೂರು: ಅತಿ ವೇಗವಾಗಿ ಬಂದ ಶಾಲಾ ವಾಹನದಡಿ ಸಿಕ್ಕು 35 ವರ್ಷದ ಮಹಿಳೆಯೊಬ್ಬರು ತನ್ನ ಮಗನೆದುರೇ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಶಾಲಾ ವ್ಯಾನ್ ಮಹಿಳಾ ಚಾಲಕಿಯನ್ನು ಬಂಧಿಸಿದ ಪೋಲೀಸರು ಚಾಲಕಿಯ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಹೇಳಿದ್ದಾರೆ. 
ಸತ್ತ ಮಹಿಳೆಯನ್ನು ಗೋವಿಂದರಾಜು ಅವರ ಪತ್ನಿ ಪೂರ್ಣಿಮಾ ಎಂದು ಗುರುತಿಸಲಾಗಿದ್ದು ಆರೋಪಿ ಚಾಲಕಿ ನೇಪಾಳ ಮೂಲದ ಪೂನಂ ಬಹದೂರ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಶುಕ್ರವಾರ ಸಂಜೆ 4.30ರ ಸುಮಾರಿಗೆ ಪೂರ್ಣಿಮಾ ತನ್ನ ಮಗ ಅರುಣ್ ನನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಾರುತಿ ಎಸ್ಕೋ ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಪೂನಂ ಕೆಜಿ ಹಳ್ಳಿ ಕಡೆಗೆ ತೆರಳುತ್ತಿದ್ದಳು. ಶಾಲಾ ಮಕ್ಕಳನ್ನು ಡ್ರಾಪ್ ಮಾಡಿದ ಬಳಿಕ ಅತಿಯಾದ ಮಳೆಯಲ್ಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪೂನಂ ವಾಹನವನ್ನು ಮನೆಯೊಂದರ ಕಂಪೌಂಡ್ ಗೆ ಡಿಕ್ಕಿ ಹೊಡೆಸಿದ್ದಾಳೆ. ಬಳಿಕ ವಾಹನವು ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದ ಪೂರ್ಣಿಮಾ ಮೇಲೆ ಹರಿದಿದೆ.
ಅಪಘಾತವಾದ ತಕ್ಷಣ ಎಚ್ಚರ ವಹಿಸಿದ ಪುತ್ರ ಅರುಣ್ ಹಾಗೂ ಇನ್ನೋರ್ವ ಪಾದಚಾರಿ ಸುನೀಲ್ ಕುಮಾರ್ ಕೆಜಿ ಹಳ್ಳಿ ಸಂಚಾರಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲೀಸರು ಚಾಲಕಿಯನ್ನು ಬಂಧಿಸಿದ್ದಾರೆ.
ಪೂನಂ ಕಳೆದ ಆರು ವರ್ಷಗಳಿಂದ ನಾಗವಾರದ ಪೂರ್ಣಸ್ಮೃತಿ ಶಾಲೆಯಲ್ಲಿ ಶಾಲಾ ವಾಹನ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಅವರ ಮನೆಗಳಿಕೆ ಡ್ರಾಪ್ ಮಾಡುತ್ತಿದ್ದಳು. ಘಟನೆ ನಡೆದ ವೇಳೆ ಶಾಲಾ ವಾಹನದಲ್ಲಿ ಯಾವ ವಿದ್ಯಾರ್ಥಿಗಳೂ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೂರ್ಣಿಮಾ ಪತಿ ಗೋವಿಂದರಾಜು ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
SCROLL FOR NEXT