ಬೆಳ್ತಂಗಡಿ: ಎರಡು ದಿನಗಳಿಂದ ಕಾಣೆಯಾಗಿದ್ದ ಬೆಂಗಳೂರಿನ ಬಾಲಕನೊಬ್ಬನ ಮೃತದೇಹ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ಹೂಡಿ ಮುನಿಸ್ವಾಮಿ ಲೇಔಟ್ ನಿವಾಸಿ ಯಶವಂತ ಸಾಯಿ (15) ಮೃತಪಟ್ಟಿದ್ದಾನೆ. ಈತನ ಶವವು ಗುರುವಾಯನಕೆರೆ ಸಮೀಪದ ಕುವೆಟ್ಟು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಇದೇ ಕೆರೆ ದಡದಲ್ಲಿ ಆತನ ಶಾಲಾ ಬ್ಯಾಗ್, ಮತ್ತು ಚಪ್ಪಲಿಗಳು ನಿನ್ನೆ (ಬುಧವಾರ) ಪತ್ತೆಯಾಗಿತ್ತು. ಬ್ಯಾಗ್ ಮತ್ತಿತರೆ ವಸ್ತುಗಳು ಕ್ಂಡುಬಂದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದ್ದು ಗುರುವಾರ ಮುಂಜಾನೆ ಬಾಲಕನ ಶವ ಕಾಣಿಸಿದೆ.
ಪ್ರೇಮ್ ಕುಮಾರ್ ಎಂಬವರ ಪುತ್ರನಾದ ಯಶವಂತ್ ತನ್ನ ಅಜ್ಜಿ ತಾತನ ಮನೆಯಲ್ಲಿ ವಾಸವಿದ್ದ. ಆತನ ಪೋಷಕರು ಆಂಧ್ರಪ್ರದೇಶದ ಕುಪ್ಪಂನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ಐಟಿಐ ವಿದ್ಯಾಮಂದಿರ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ.ಯಶವಂತ್ ಜುಲೈ 24 ರಂದು ಶಾಲೆಗೆಂದು ಹೋದವನು ಮನೆಗೆ ಹಿಂತಿರುಗಿರಲಿಲ್ಲ. ಈ ಕುರಿತಂತೆ ಆತನ ಅಜ್ಜ ತ್ಯಾಗರಾಜ್ ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಹಾಗೆ ಕೆರೆ ದಡದ ಮೇಲೆ ಪತ್ತೆಯಾಗಿದ್ದ ಬ್ಯಾಗ್ ನಲ್ಲಿ ಶಾಲಾ ಐಡಿ, ಆಧಾರ್ ಕಾರ್ಡ್, ಬಸ್ ಟಿಕೆಟ್ ಗಳು ಪತ್ತೆಯಾಗಿದ್ದವು. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ.