ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಬೆಂಗಳೂರು; 2019 ಲೋಕಸಬಾ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಜೆಡಿಎಸ್ ಜೊತೆಗೆ ಈ ವರೆಗೂ ಯಾವುದೇ ರೀತಿಯ ಮಾತುಕತೆಗಳನ್ನು ನಡೆಸಲಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 2019ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಗುರಿಯನ್ನು ಹೊಂದರಲಾಗಿದೆ. ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಆದರೆ, ಸೀಟು ಹಂಚಿಕೆ ಕುರಿತಂತೆ ಈ ವರೆಗೂ ಜೆಡಿಎಸ್ ಜೊತೆಗೆ ಮಾತುಕತೆಗಳನ್ನು ನಡೆಸಿಲ್ಲ ಎಂದು ಹೇಳಿದ್ದಾರೆ.
ನಾನು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಕುಳಿತು ಬಲಾಬಲಗಳನ್ನು ಚರ್ಚಿಸಿ ಯಾವುದೇ ಗೊಂದಲಗಳಿಲ್ಲದೆ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳಿ ಸಚಿವ ಸ್ಥಾನ ಹಂಚಿಕೆ ಕುರಿತಂತೆ ಕಾಂಗ್ರೆಸ್'ನಲ್ಲಿ ಅಸಮಾಧಾನಗಳುಂಟಾಗಿವೆ ಎಂಬ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವಅವರು, ಕಾಂಗ್ರೆಸ್ 22 ಸ್ಥಾನಗಳು ದೊರಕಿವೆ. ಯಾವುದೇ ಹಿಂಜರಿಕೆಯಿಲ್ಲದೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿದ್ದೇವೆ. ಮೈತ್ರಿ ಸರ್ಕಾರ ತೆಗೆದುಕೊಂಡು ನಿರ್ಧಾರದಲ್ಲಿ ಉಭಯ ಪಕ್ಷಗಳ ಮೇಲೆ ನಿರ್ಬಂಧಗಳಿದ್ದೇ ಇರುತ್ತವೆಂದಿದ್ದಾರೆ.
ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕೆ ಆಗ್ರಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನದಲ್ಲಿ ಎರಡು ಬಾರಿ ಮುಂದುವರೆದವರಿಗೆ ಮತ್ತೆ ಸಚಿವ ಸ್ಥಾನ ನೀಡಬಾರದು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಅವರ ಸಲಹೆಗಳನ್ನು ಈಗಾಗಲೇ ಪಕ್ಷದ ಹೈಕಮಾಂಡ್'ಗೆ ರವಾನಿಸಲಾಗಿದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯೆ ನೀಡಿತ ಅವರು, ನಿಷೇಧಿತ ನೋಟುಗಳನ್ನು ಅಕ್ರಮವಾಗಿ ಬದಲಿಸಿಕೊಂಡ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಸುರೇಶ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ತನಿಖೆ ಹಾಗೂ ವಿಚಾರಣೆ ಹೆಸರಿನಲ್ಲಿ ವ್ಯಕ್ತಿಗಳ ಹೆಸರನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಿಬಿಐ ಸಂಸ್ಥೆಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದಾರೆ. ಹಲವರಿಗೆ ಸ್ಥಾನವನ್ನು ಅಲಂಕರಿಸುವ ಶಕ್ತಿಯೂ ಇದೆ ಎಂದಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಭೆಯಲ್ಲಿ ಮೊಬೈಲ್ ನಿಷೇಧಿಸಿರುವ ಕುಮಾರಸ್ವಾಮಿಯವರ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅವರು, ಸಭೆ ವೇಳೆ ಯಾವುದೇ ರೀತಿಯ ಮುಜುಗರಗಳು ಎದುರಾಗದಂತೆ ನಿರ್ಧಾರ ಕೈಗೊಳ್ಳಲು ಇದು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics