ರಾಜ್ಯ

ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಕಮಲ್ ಹಾಸನ್: ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಚರ್ಚೆ

Shilpa D
ಬೆಂಗಳೂರು: ಖ್ಯಾತ ನಟ ಹಾಗೂ ತಮಿಳುನಾಡು ರಾಜಕಾರಣಿ ಕಮಲ್ ಹಾಸನ್ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಕಮಲ್ ಹಾಸನ್ ಹಾಗೂ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನಾನು ಇಲ್ಲಿ ರಾಜಕೀಯ ಚರ್ಚಿಸಲು ಬಂದಿಲ್ಲ. ಕೇವಲ ರೈತರ ಪರವಾಗಿ ದನಿಯಾಗಿ ಬಂದಿದ್ದೇನೆ. ನಮಗೆ ತಮಿಳುನಾಡಿನ ರೈತರು ಹಾಗೂ ಕರ್ನಾಟಕದ ರೈತರ ಹಿತಾಸಕ್ತಿ ಮುಖ್ಯ ಎಂದು ಕಮಲ್‌ಹಾಸನ್‌ ಹೇಳಿದರು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಕಮಲ್‌ ಹಾಸನ್‌ ತಿಳಿಸಿದರು. 
ನಾವು ಎರಡೂ ರಾಜ್ಯಗಳವರು ಸಹೋದರತ್ವದಿಂದ ಬಾಳಬೇಕಾಗಿದೆ.  ನಾನು ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕಕ್ಕೆ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ವಿಷಯನೇ ತುಂಬಾ ಮುಖ್ಯ ಎಂದು ಹೇಳಿದ್ದಾರೆ.ಕುರುವೈ ಬೆಳೆಗೆ ನೀರು ಬೇಕು. ಅದಕ್ಕಾಗಿ ಜನರಿಗಾಗಿ ಸೇತುವೆ, ಅಳಿಲು, ಕೊನೆಗೆ ಜನರ ಚಪ್ಪಲಿಯಾಗಲೂ ಸಿದ್ದ ಎಂದು ಹೇಳಿದ್ದಾರೆ.
ಕಾವೇರಿ ವಿವಾದ ಇಂದು ನಿನ್ನೆಯದಲ್ಲ.ಎರಡೂ ರಾಜ್ಯಗಳ ರೈತರ ನಡುವೆ ಕಾವೇರಿ ನೀರು ಹಂಚಿಕೆಯಾಗಬೇಕು.ಈ ಸಂಬಂಧ ತಮಿಳುನಾಡು ಸರ್ಕಾರದ ಜತೆಯೂ ಮಾತುಕತೆಗೆ ನಾನು ಸಿದ್ದ.ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಹೋಗಬೇಕು ಎಂದು ಕುಮಾರಸ್ವಾಮಿ ತಿಳಿಸಿದರು. 
ಕರ್ನಾಟಕ ತಮಿಳುನಾಡು ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ನಮ್ಮ ರೈತರು ಬದುಕಬೇಕು, ತಮಿಳುನಾಡಿನ ರೈತರು ಬದುಕಬೇಕು, ಈ ಸಂಬಂಧ ತಮಿಳುನಾಡು ಸರ್ಕಾರದ ಜತೆಯೂ ಮಾತುಕತೆಗೆ ನಾನು ಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಹೋಗಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಸೌಹಾರ್ಧಯುತವಾಗಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.
SCROLL FOR NEXT