ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷಕೊಂದಿಗೆ ನಡೆಸಲಾದ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶಕ್ಕೆ ತಲೆ ಬಾಗುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಲ್ಲದೆ ಕನ್ನಡಿಗನಾಗಿ ಹೇಳುವುದಾದರೆ, ಕಾಳಾ ಚಿತ್ರವನ್ನು ಬಿಡುಗಡೆ ಮಾಡದೆ ಇರುವುದೇ ಸೂಕ್ತ. ಇದರಿಂದ ಚಿತ್ರ ತಂಡವೇ ಹಿಂದೆ ಸರಿಯುವುದು ಉತ್ತಮ. ಚಿತ್ರ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳು, ಸಿನಿಮಾ ಮಂಡಳಿಯ ವಿರೋಧವಿದೆ. ಒಂದು ವೇಳೆ ಚಿತ್ರವನ್ನು ಬಿಡುಗಡೆ ಮಾಡಿದರೂ ಅದರಿಂದಾಗುವ ನಷ್ಟ ಹಾಗೂ ಪರಿಣಾಮಗಳನ್ನು ಅವರೇ ಎದುರಿಸಬೇಕಾಗುತ್ತದೆ. ನಾನೊಬ್ಬ ಕನ್ನಡಿಗನಾಗಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆಂದು ತಿಳಿಸಿದ್ದಾರೆ.