ರಾಜ್ಯ

ಮುಚ್ಚಲಿವೆ 3,450 ಏಕೋಪಾಧ್ಯಾಯ ಶಾಲೆಗಳು: ಸಮೀಪದ ಶಾಲೆಯೊಂದಿಗೆ ವಿಲೀನ?

Shilpa D
ಬೆಂಗಳೂರು: ರಾಜ್ಯಾದ್ಯಂತ 3,450 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಶಾಶ್ವತವಾಗಿ ಮುಚ್ಚಲಿವೆ. 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವ 3,450 ಏಕೋಪಾಧ್ಯಾಯ ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದ್ದಾರೆ.
ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ 21,225 ಪ್ರಾಥಮಿಕ ಶಾಲೆ, 22,487 ಹಿರಿಯ ಪ್ರಾಥಮಿಕ ಸೇರಿ 43,712 ಸರ್ಕಾರಿ ಶಾಲೆಗಳಿವೆ. ಪ್ರಾಥಮಿಕ ವಿಭಾಗದಲ್ಲಿ 3,372 ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ 78 ಸೇರಿ 3,450 ಏಕೋಪಾಧ್ಯಾಯ ಶಾಲೆಗಳಿವೆ. ಈ ಶಾಲೆಯ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಉದ್ದೇಶದಿಂದ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಇರುವ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಮೀಪದಲ್ಲಿರುವ ಶಾಲೆಗಳೊಂದಿಗೆ ಏಕೋಪಾದ್ಯಾಯ ಶಾಲೆಯನ್ನು ವಿಲೀನಗೊಳಿಸಿದ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ 700 ರೂ. ಪ್ರಯಾಣ ವೆಚ್ಚ ಭರಿಸುವ ಜೊತೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುಪವ ಹಾಗೂ ಮನೆಗೆ ಬಿಡಲು ವಾಹನ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದ್ದಾರೆ. 
ಮಕ್ಕಳಿಗೆ ಏಕೋಪಾಧ್ಯಾಯ ಶಾಲೆಗಿಂತ ಎಲ್ಲ ಸೌಲಭ್ಯ ಇರುವ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಬಹುದು. ಸುಮಾರು 30 ಸಾವಿರ ಮಕ್ಕಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದರು.
SCROLL FOR NEXT