ಕಾರವಾರ: ತನ್ನ ಅಪಹರಣ ಪ್ರಕರಣವನ್ನೇ ಸುಳ್ಳು ಮಾಡಲು ಹೊರಟ ಉತ್ತರ ಪ್ರದೇಶದ 22 ವರ್ಷದ ಯುವಕನೊಬ್ಬ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಈತನನ್ನು ಕಾರವಾರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳು ಬಂಧಿಸಿದರು.
ಉತ್ತರ ಪ್ರದೇಶದ ಬರೇಲಿ ನಿವಾಸಿಯಾದ ಭವೇಶ್ ಪಾಠಕ್ ದೆಹಲಿಯಲ್ಲಿ ನ್ಯಾಯಾಧೀಶರ ನೇಮಕದ ಪರೀಕ್ಷೆಗೆ ಕೋಚಿಂಗ್ ಪಡೆದುಕೊಳ್ಳಲೆಂದು ಸೇರಿಕೊಂಡಿದ್ದ. ಮಗನ ಕೋಚಿಂಗ್ ಗೆ ತಂದೆ ಚಂದ್ರ ಬೋಜ್ ಪಾಠಕ್ ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿ 9 ಲಕ್ಷ ರೂಪಾಯಿ ಹಣ ಹೊಂದಿಸಿ ದೆಹಲಿಗೆ ಕಳುಹಿಸಿದರು. ಆದರೆ ಮಗ ದೆಹಲಿಯಲ್ಲಿ ಆ ಹಣವನ್ನು ಮೋಜು ಮಸ್ತಿ ಮಾಡಿ ಕಳೆದ. ನಂತರ ಕೋಚಿಂಗ್ ಗೆ ಹಣ ಇರಲಿಲ್ಲ. ಮತ್ತೆ ತಂದೆಯಲ್ಲಿ ಹಣ ಕೇಳಿದರೆ ಸಿಗುವುದಿಲ್ಲ. ಆಗ ಅವನ ತಲೆಗೆ ಹೊಳೆದಿದ್ದೇ ತನ್ನ ಕಿಡ್ನ್ಯಾಪ್ ಡ್ರಾಮಾ.
ಕಳೆದ ಜೂನ್ 7ರಂದು ತಂದೆಯ ಮೊಬೈಲ್ ಗೆ ಸಂದೇಶ ಕಳುಹಿಸಿ ಲಾರ್ರೆನ್ಸ್ ಎಂಬ ವ್ಯಕ್ತಿ ತನ್ನನ್ನು ಅಪಹರಿಸಿದ್ದು ಬಿಡುಗಡೆಗೆ 25 ಲಕ್ಷ ರೂಪಾಯಿ ಬೇಡಿಕೆಯಿಡುತ್ತಿದ್ದಾನೆ ಎಂದು ಹೇಳಿದ. ಗಾಬರಿಯಾದ ತಂದೆ ಬರೇಲಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಈ ಮಧ್ಯೆ ಭವೇಶ್ ತನ್ನ ಅಪ್ರಾಪ್ತ ಸೋದರ ಸಂಬಂಧಿಯ ಜೊತೆ ಗೋವಾಕ್ಕೆ ತೆರಳಿ ಅಲ್ಲಿ ತಂಗಲು ಆರಂಭಿಸಿದ. ತನ್ನ ತಂದೆ 25 ಲಕ್ಷ ರೂಪಾಯಿ ಹಣ ನೀಡಿದ ಮೇಲೆ ದೆಹಲಿಗೆ ವಾಪಸ್ಸಾಗುವ ಎಂದು ಯೋಚನೆ ಮಾಡಿಕೊಂಡಿದ್ದ.
ಬರೇಲಿ ಪೊಲೀಸರು ಭವೇಶ್ ನ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಿದಾಗ ಆತ ಗೋವಾದಲ್ಲಿರುವುದು ತಿಳಿದುಬಂತು. ಮೂರು ದಿನಗಳ ಹಿಂದೆ ಪೊಲೀಸರು ಮತ್ತು ಭವೇಶ್ ನ ತಂದೆ ಗೋವಾಕ್ಕೆ ತೆರಳಿದರು. ಈ ಕೇಸಿನ ಬಗ್ಗೆ ಗೋವಾ ಮತ್ತು ಕರ್ನಾಟಕ ಪೊಲೀಸರಿಗೆ ಮೊದಲೇ ವಿಷಯ ತಿಳಿಸಲಾಗಿತ್ತು.
ನಿನ್ನೆ ಬೆಳಗ್ಗೆ ಭವೇಶ್ ಕಾರವಾರ ಕಡೆಗೆ ಹೋಗುತ್ತಿರುವುದು ಗೋವಾ ಪೊಲೀಸರಿಗೆ ಗೊತ್ತಾಯಿತು ಅವರು ತಕ್ಷಣ ಕಾರವಾರ ಪೊಲೀಸರಿಗೆ ತಿಳಿಸಿದರು. ಸಿಸಿಟಿವಿ ಕ್ಯಾಮರಾ ಮೂಲಕ ಆತನ ಫೋಟೋವನ್ನು ಕೂಡ ಶೇರ್ ಮಾಡಿದ್ದರು. ಮಾಹಿತಿ ಸಿಕ್ಕಿದ ಕೂಡಲೇ ಕಾರವಾರ ರೈಲ್ವೆ ರಕ್ಷಣಾ ಪಡೆಯ ಇನ್ಸ್ ಪೆಕ್ಟರ್ ದೀಪಕ್ ಕೆ ಶರ್ಮ ಮತ್ತು ಅವರ ತಂಡ ಭವೇಶ್ ಮತ್ತು ಆತನ ಸೋದರ ಸಂಬಂಧಿಯನ್ನು ಬಂಧಿಸಿತು.
ಇಬ್ಬರನ್ನೂ ಕಾರವಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ಇದೀಗ ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿದ್ದಾರೆ.