ಬೆಂಗಳೂರು: ಎಸ್ಐಟಿ ಅಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ವಿಚಾರಣೆಯ ಬಹುತೇಕ ಭಾಗವನ್ನು ಮುಗಿಸಿದರೂ ಕೂಡ ಹತ್ಯೆಗೆ ಪಿತೂರಿ ನಡೆಸಿದವರಲ್ಲಿ ಮುಖ್ಯ ವ್ಯಕ್ತಿ ಯಾರು ಎಂದು ನಿರ್ಧಾರಕ್ಕೆ ಬರುವಲ್ಲಿ ಅವರಿಗೆ ಕಷ್ಟವಾಗುತ್ತಿದೆ.
ಹತ್ಯೆ ಕೇಸಿನ ಪ್ರಮುಖ ಘಟ್ಟಕ್ಕೆ ಬಂದಿರುವ ತನಿಖಾಧಿಕಾರಿಗಳು ಅಮೋಲ್ ಕಾಳೆಯೇ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಿದರೂ ಕೂಡ ಪ್ರಕರಣವನ್ನು ತಳಮಟ್ಟದಿಂದ ಭೇದಿಸುವಲ್ಲಿ ವಿಫಲರಾಗಿದ್ದಾರೆ. ಗೌರಿ ಲಂಕೇಶ್, ಪ್ರೊ ಎಂ ಎಂ ಕಲ್ಬುರ್ಗಿ, ಗೋವಿಂದ್ ಪನ್ಸರೆ ಮತ್ತು ದಾಬೋಲ್ಕರ್ ಕೊಲೆ ಕೇಸಿನ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಗೌರಿ ಲಂಕೇಶ್ ಹತ್ಯೆಯಾಗಿ 9 ತಿಂಗಳು ಕಳೆದ ನಂತರ 6 ಮಂದಿ ಶಂಕಿತರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದರೂ ಕೂಡ ಆರೋಪಿಗಳಿಂದ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಎಲ್ಲಾ 6 ಮಂದಿ ಆರೋಪಿಗಳಿಗೆ ಯಾರು ಏನು ಮಾಡಿದ್ದಾರೆ ಎಂದು ಗೊತ್ತಿದೆ. ಆದರೆ ಯಾರೂ ಕೂಡ ಸರಿಯಾಗಿ ಬಾಯ್ಬಿಡುತ್ತಿಲ್ಲ. ಇದರಿಂದ ನಮಗೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಗೌರಿ ಲಂಕೇಶ್ ಹತ್ಯೆ ಮಾಡಲು ಕಾಳೆಗೆ ಯಾರೋ ಬೇರೆಯವರು ಸೂಚನೆ ನೀಡಿದ್ದಾರೆ ಎಂದು ನಮಗೆ ಗೊತ್ತಾಗುತ್ತಿದೆ. ಆದರೆ ಅವರ ಹೆಸರನ್ನು ಕಾಳೆ ಹೇಳುತ್ತಿಲ್ಲ ಮತ್ತು ಅವರನ್ನು ರಕ್ಷಣೆ ಮಾಡಲು ನೋಡುತ್ತಿದ್ದಾರೆ ಎನಿಸುತ್ತಿದೆ. ಅವರ ಕೆಲಸಕ್ಕೆ ಮೊಬೈಲ್ ಫೋನುಗಳನ್ನು ಹೆಚ್ಚು ಬಳಕೆ ಮಾಡದಿದ್ದುದರಿಂದ ಫೋನ್ ಕರೆಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ. ಸ್ವತಃ ಕಾಳೆಯೇ ಕೊಲೆ ಮಾಡಿದ್ದನೇ ಅಥವಾ ಆತ ಬೇರೆಯವರ ಸೂಚನೆ ಅನುಸರಿಸಿದನೇ ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಅಧಿಕಾರಿಗಳು.
ಇದುವರೆಗೆ ಕರ್ನಾಟಕದಿಂದ ಬಂಧಿತರಾದ ನಾಲ್ವರಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ಅವರ ಸಂಪರ್ಕವೆಲ್ಲ ಕಾಳೆಯ ಕಡೆಗಿದ್ದು ಅವನಿಗಿಂತ ಆಚೆ ಅವರಿಗೆ ಬೇರೆ ಯಾರನ್ನೂ ಗೊತ್ತಿಲ್ಲ ಎನ್ನುವ ಎಸ್ ಐಟಿ ಅಧಿಕಾರಿಗಳು ತಳಮಟ್ಟದಿಂದ ಪ್ರಕರಣವನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.