ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು; ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರವು ರೂ.1050 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ಸೋಮವಾರ ರಾಜಧಾನಿ ದೆಹಲಿಗೆ ತೆರಳುತ್ತಿರುವುದಾಗಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಉಪ ಕಾರ್ಯದರ್ಶಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬರದಿದ್ದರಿಂದ ರಾಜ್ಯ ಸರ್ಕಾರವೇ ಈ ಮೊತ್ತವನ್ನು ಭರಿಸಿದೆ. ಬಾಕಿ ಮೊತ್ತ ಶೀಘ್ರ ಬಿಡುಗಡೆ ಮಾಡುವಂತೆ ಸೋಮವಾರ ಕೇಂದ್ರ ಆರ್'ಡಿಪಿಆರ್ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ಸ್ವತ್ತುಗಳಲ್ಲು ಸ್ಥಳಾವಕಾಶ ಇರುವ ಕಡೆ ಗಿಡನೆಡುವ ಕಾರ್ಯಕ್ರವನ್ನು ರೂಪಿಸಲು ಉದ್ಯೋಗ ಖಾತರಿ ಯೋಜನೆ ಅಡಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಬಯಲು ಶೌಚ ಮುಕ್ತ: ಶೀಘ್ರದಲ್ಲೇ ಉನ್ನತ ಸ್ಥಾನದಲ್ಲಿ ರಾಜ್ಯ
ರಾಜ್ಯವನ್ನು ಬಯಲು ಶೌಚಾಲಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವನ್ನು ಹಾಕಲಾಗುತ್ತಿದ್ದು. ಕೇವಲ 6-7 ಜಿಲ್ಲೆಗಳನ್ನು ಮಾತ್ರ ಬಯಲು ಶೌಚಾಲಯ ಮುಕ್ತಗೊಳಿಸಬೇಕು. ಇನ್ನುಳಿದಂತೆ ಎಲ್ಲಾ ಜಿಲ್ಲೆಗಳು ಬಯಲು ಶೌಚಾಲಯ ಮುಕ್ತಗೊಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯವನ್ನು ಬಯಲು ಶೌಚಾಲಯ ಮುಕ್ತಗೊಳಿಸುವ ಕಾರ್ಯವು ನಿಧಾನವಾಗಿ ನಡೆಯುತ್ತಿತ್ತು. ಇದೀಗ ಕಾರ್ಯಕ್ಕೆ ವೇಗ ನೀಡಲಾಗಿದ್ದು, ಶೀಘ್ರದಲ್ಲಿಯೇ ರಾಜ್ಯವು ಮೊದಲ ಐದು ಸ್ಥಾನಗಳಲ್ಲಿ ಒಂದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮೂರನೇ ಹಂತದಲ್ಲಿ ರೂ.400-500 ಕೋಟಿ ಬೇಕಾಗುವ ನಿರೀಕ್ಷೆಯಿದೆ. ರಸ್ತೆ ನಿರ್ಮಾಣಕ್ಕಾಗಿ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ. ಆದರೆ, ಮಾರ್ಗದರ್ಶಿ ಮಾತ್ರ ಲಭ್ಯವಾಗಿದೆ. ಮೂರನೇ ಹಂತದ ರಸ್ತೆ ನಿರ್ಮಾಣದ ಯೋಜನೆಯು 3 ವರ್ಷದ ಅವಧಿಯಾಗಿರುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು 17000 ಶುದ್ಧ ಕುಡಿಯುವ ನೀರು ಘಟಕಗಳನ್ನು ನಿರ್ಮಿಸುವ ಗುರು ಹೊಂದಲಾಗಿದ್ದು, 13962 ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗಿದೆ. ಸುಮಾರು 3000 ಘಟಕಗಳ ನಿರ್ಮಾಣದ ಕಾರ್ಯವು ಇನ್ನೂ ವಿವಿಧ ಹಂತದಲ್ಲಿವೆ. ಅವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಕೆಲವು ಜಿಲ್ಲೆಯಲ್ಲಿ ಶುಧ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಇದೆ. ಈ ಘಟಕಗಳ ಜು.15ರೊಳಗೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಜು.1ರೊಳಗೆ ಕುಡಿಯುವ ನೀರಿನ ಕ್ರಿಯಾ ಯೋಜನೆ ತಯಾರಿಸುವಂತೆಯೂ ತಿಳಿಸಲಾಗಿದೆ ಎಂದು ಹೇಳಿದ್ದಾರೆ.