ಬೆಂಗಳೂರು: ರೌಡಿ ಶೀಟರ್ ಮನೆ ಮೇಲೆ ಸಿಸಿಬಿ ದಾಳಿ, ಮಹತ್ವದ ದಾಖಲೆ ವಶ
ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿನ ಈತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ವಿವಿಧೆಡೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ರವಿಯನ್ನು ಬುಧವಾರ ಮಧ್ಯಾಹ್ನ ಕೆಂಗೇರಿ ಸಮೀಪದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಬಂಧಿಸಲಾಗಿತ್ತು. ಹೀಗೆ ಬಂಧನಕ್ಕೆ ಮುನ್ನ ಫಾರ್ಚೂನ್ ಕಾರಿನಲ್ಲಿ ತೆರಳುತ್ತಿದ್ದ ಆತ ಪೋಲೀಸರತ್ತ ಗುಂಡು ಹಾರಿಸಿದ್ದು ಘಟನೆಯಲ್ಲಿ ಓರ್ವ ಪೋಲೀಸ್ ಪೇದೆಗೆ ಗಾಯವಾಗಿತ್ತು. ಅದಾಗ ತಮ್ಮ ಆತ್ಮರಕ್ಷಣೆಗಾಗಿ ಪೋಲೀಸರು ಸಹ ಗುಂಡು ಹಾರಿಸಿದ್ದು ಒಂದು ಗುಂಡು ಆತನ ಕಾಲಿಗೆ, ಇನ್ನೊಂದು ಹೊಟ್ಟೆ ಭಾಗಕ್ಕೆ ತಗುಲಿತ್ತು. ಹೀಗೆ ಗುಂಡೇಟು ತಿಂದ ಬಳಿಕ ಕುಸಿದು ಬಿದ್ದ ರವಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದು ಸಧ್ಯ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದ ಸೈಕಲ್ ರವಿ ವಿರುದ್ಧ 6 ಕೊಲೆ ಸೇರಿ ಒಟ್ಟು 24 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. 1998 ರಲ್ಲಿ ಆತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು ಸುಮಾರು ಎರಡು ದಶಕಗಳಿಂದ ಬೆಂಗಳೂರಿನ ಪಾತಕ ಲೋಕದಲ್ಲಿ ಹೆಸರಾಗಿದ್ದ ರವಿ ಆರು ವರ್ಷಗಳಿಂದಲೂ ಪೋಲೀಸರ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದ್ದ.
ಸಧ್ಯ ರವಿಯನ್ನು ಬಂಧಿಸಿರುವ ಪೋಲೀಸರು ಆತನ ಸಹಚರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರವಿ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos