ರಾಜ್ಯ

12 ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ರಾಜಧಾನಿಗೆ ಮರಳಿದ ಮಾಜಿ ಸಿಎಂ ಸಿದ್ದರಾಮಯ್ಯ

Sumana Upadhyaya

ಮಂಗಳೂರು/ಬೆಂಗಳೂರು: 12 ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ಧರ್ಮಸ್ಥಳದ ಶಾಂತಿವನದಿಂದ ಬಿಡುಗಡೆಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ನಿನ್ನೆ ವಾಪಸ್ಸಾಗಿದ್ದಾರೆ.

ನಿನ್ನೆ ಬೆಳಗ್ಗೆ 11 ಗಂಟೆಗೆ ಧರ್ಮಸ್ಥಳ ಸಮೀಪ ಉಜಿರೆಯಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಬಿಡುಗಡೆಯಾದ ನಂತರ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ತೆರಳಿದ ಸಿದ್ದರಾಮಯ್ಯ ಅಲ್ಲಿ ಶತರುದ್ರಾಭಿಷೇಕ ಮಾಡಿಸಿದರು. ಅಲ್ಲಿಯೇ ಮಧ್ಯಾಹ್ನ ದೇವರ ಪ್ರಸಾದ ಸವಿದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್ ಮತ್ತು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಸಿದ್ದರಾಮಯ್ಯ ಜೊತೆಗಿದ್ದರು.

ವಿಡಿಯೊ ಟೇಪ್ ಬಿಡುಗಡೆಯಿಂದಾಗಿ ಸುದ್ದಿಯಲ್ಲಿರುವ ಸಿದ್ದರಾಮಯ್ಯನವರು ದೇವಾಲಯದ ಹೊರಗೆ ಜಮಾಯಿಸಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು. ದೇವಸ್ಥಾನದ ಹೊರಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ನೋಡಿ ಕೈಬೀಸಿದರು.

ಮಧ್ಯಾಹ್ನ ಧರ್ಮಸ್ಥಳದಿಂದ ಹೊರಟು ಮಂಗಳೂರು ಬಳಿಯ ಕಾವೂರಿಗೆ ತೆರಳಿದರು. ಅಲ್ಲಿ ಕರಾವಳಿ ಕುರುಬ ಸಂಘ ನಿರ್ಮಿಸಿದ್ದ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದರು. ಅಲ್ಲಿ ಅವರನ್ನು ಸನ್ಮಾನಿಸಲಾಯಿತು. ಇಲ್ಲಿ ಕೂಡ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು. ತಮಗೆ ಏನಾದರೂ ಹೇಳಬೇಕೆಂದು ಅನಿಸಿದರೆ ಸುದ್ದಿಗೋಷ್ಠಿ ಕರೆದು ಹೇಳುವುದಾಗಿ ತಿಳಿಸಿದರು. ನಂತರ ವಿಮಾನ ಮೂಲಕ ಬೆಂಗಳೂರಿಗೆ ತೆರಳಿದರು.

ಶಾಂತಿವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಪ್ರಶಾಂತ್ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ, 12 ದಿನಗಳ ಕಾಲ ಸಿದ್ದರಾಮಯ್ಯನವರು ಕಠಿಣ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು 3 ಕೆ ಜಿ ತೂಕ ಕಳೆದುಕೊಂಡಿದ್ದಾರೆ. ವೇಳಾಪಟ್ಟಿ ಪ್ರಕಾರ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿ ಬೇರೆಯವರೊಡನೆ ಸುಲಭವಾಗಿ ಬೆರೆಯುತ್ತಿದ್ದರು ಎಂದರು.

ಇಂದು ಕಾಂಗ್ರೆಸ್ ನಾಯಕರಿಂದ ಸಿದ್ದರಾಮಯ್ಯ ಭೇಟಿ: ಸಿದ್ದರಾಮಯ್ಯನವರ ಇತ್ತೀಚಿನ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲವುಂಟಾಗಿದೆ ಎಂಬ ಪಕ್ಷದ ಹೈಕಮಾಂಡ್ ಆತಂಕವನ್ನು ಅವರಿಗೆ ಮನವರಿಕೆ ಮಾಡಲು ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಾಡಿದ್ದು ಜುಲೈ 1ರಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದೆ.

SCROLL FOR NEXT