ಬೆಂಗಳೂರು: ಅಕ್ರಮ ಹಣ ಸಂಗ್ರಹ ಮತ್ತು ವಿನಿಮಯ ಹಾಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಡಿ ಕೆ ಸಹೋದರರಿಗೆ ಇನ್ನಷ್ಟು ಕಗ್ಗಂಟಾಗುವ ಲಕ್ಷಣ ಕಾಣುತ್ತಿದೆ. ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಿ ಕೆ ಶಿವಕುಮಾರ್, ಅವರ ಸೋದರ ಡಿ ಕೆ ಸುರೇಶ್ ಮತ್ತು ಅವರ ಮಾಜಿ ಆಪ್ತ ಸಹಾಯಕರು ಅಮಾನ್ಯತೆಗೊಂಡ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡಿದ ಸಂಬಂಧ ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾರೆ.
ನಿನ್ನೆ ಸಿಬಿಐ ವಿಶೇಷ ನ್ಯಾಯಾಲಯ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ನೆಲಮಂಗಲ ತಾಲ್ಲೂಕಿನ ಟಿ ಬೇಗೂರಿನ ಬಿ ಪದ್ಮನಾಭಯ್ಯ ಎಂಬುವವರು ಆರೋಪಿಗಳಾಗಿದ್ದು ಅವರು ಡಿ ಕೆ ಸುರೇಶ್ ಅವರ ಖಾಸಗಿ ಸಹಾಯಕರಾಗಿದ್ದರು.
ರಾಮನಗರ ತಾಲ್ಲೂಕಿನ ವಿಜಯನಗರದ ಎಸ್ ಶೇಷಗಿರಿ ಎಂಬ ನಿವೃತ್ತ ಅಧಿಕಾರಿ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾಗ ಖಾಸಗಿ ಸಹಾಯಕರಾಗಿದ್ದರು. ಇವರು ಮತ್ತೊಬ್ಬ ಆರೋಪಿಯಾಗಿದ್ದಾರೆ.
ಕೇಂದ್ರ ಸರ್ಕಾರ 500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ನಂತರದ ನವೆಂಬರ್ 2016ರ ಕೇಸು ಇದಾಗಿದೆ. ಕಳೆದ ಮೇ 31ರಂದು ಸಿಬಿಐ, ಸುರೇಶ್ ಅವರ ಆಪ್ತ ಸಹಾಯಕನ ಮನೆ ಮೇಲೆ ದಾಳಿ ನಡೆಸಿತ್ತು. ಸುಮಾರು 10 ಲಕ್ಷಕ್ಕೂ ಅಧಿಕ ಚಲಾವಣೆ ರದ್ದುಗೊಂಡ ನೋಟುಗಳ ಅಕ್ರಮ ವಿನಿಮಯ ಮಾಡಿದ್ದರ ಆರೋಪದ ಬಗ್ಗೆ ಬೆಂಗಳೂರು, ಕನಕಪುರ ಮತ್ತು ರಾಮನಗರದ 5 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.
ಈ ದಾಳಿ ನಡೆದ ನಂತರ ಸಿಬಿಐ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಡಿ ಕೆ ಸಹೋದರರು ಆರೋಪಿಸಿದ್ದರು. ಕೇಂದ್ರ ಸರ್ಕಾರದ ತಂತ್ರಗಳು ಮತ್ತು ತೋಳ್ಬಲ ಪ್ರದರ್ಶನ ಪ್ರಯೋಜನಕ್ಕೆ ಬರುವುದಿಲ್ಲ. ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು.
ನಿರೀಕ್ಷಣಾ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿಯಾಗಬಹುದು ಎಂದ ಕೋರ್ಟ್: ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ ಎಚ್ ಪುಷ್ಪಾಂಜಲಿ, ನವೆಂಬರ್ 8, 2016ರಂದು ಕೇಂದ್ರ ಸರ್ಕಾರ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಪಡಿಸಿ ಆದೇಶ ಹೊರಡಿಸಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಪ್ಪು ಹಣವನ್ನು ತಡೆಯಲು ಈ ಕ್ರಮ ಕೈಗೊಂಡಿತ್ತು. ಇದು ಇಡೀ ಸಮಾಜದ ಜನರ ಒಳಿತಿಗಾಗಿ ಮಾಡಿರುವುದು. ತಾವು ನಿರ್ದಿಷ್ಟ ಬ್ಯಾಂಕು ನೋಟುಗಳನ್ನು ವಿನಿಮಯ ಮಾಡಲಿಲ್ಲ ಎಂದು ಆರೋಪಿಗಳು ಹೇಳುತ್ತಿದ್ದರೂ ಕೂಡ ಇಡೀ ಪ್ರಕರಣವನ್ನು ಗಮನಿಸಿದಾಗ ಕ್ರಿಮಿನಲ್ ಪಿತೂರಿ ನಡೆದಿರುವುದು ತಿಳಿದುಬರುತ್ತಿದ್ದು ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ.