ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ ಶೇ.30ರಷ್ಟು ಹೆಚ್ಚಳ

Sumana Upadhyaya

ಬೆಂಗಳೂರು; ಆರನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ನೌಕರರ ಮೂಲ ವೇತನ ಮತ್ತು ಇತರ ಭತ್ಯೆ ಸೇರಿಸಿ ಶೇಕಡಾ 30ರಷ್ಟು ಹೆಚ್ಚಳ ಮಾಡುವಂತೆ 6ನೇ ವೇತನ ಆಯೋಗ ಶಿಫಾರಸು ಮಾಡಿದೆ.

ಇದು ಜುಲೈ 1, 2017ರಿಂದ ಪೂರ್ವಾನ್ವಯವಾಗಲಿದೆ. ಆದರೆ ವೇತನ ಹೆಚ್ಚಳ ಪ್ರಯೋಜನ ನೌಕರರಿಗೆ ಮುಂದಿನ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ 2017 ಜುಲೈ 1ರ ವೇತನದ ಮೂಲಭತ್ಯೆ ಮತ್ತು ಡಿಎ ಆಧಾರದಲ್ಲಿ ಮುಂದಿನ ತಿಂಗಳು ಏಪ್ರಿಲ್ 1ರಿಂದ ಶೇಕಡಾ 30ರಷ್ಟು ವೇತನ ಪರಿಷ್ಕರಣೆಯಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅದೇ ರೀತಿ ಪಿಂಚಣಿದಾರರಿಗೆ ಈಗಿರುವ ಕನಿಷ್ಠ ಮೊತ್ತ 4,800ರಿಂದ ಗರಿಷ್ಠ 8,500 ರೂಪಾಯಿಗಳಿಗೆ, 39,900 ರೂಪಾಯಿಗಳಿಂದ 75,300 ರೂಪಾಯಿಗಳಿಗೆ ಹಾಗೂ ಕೌಟುಂಬಿಕ ಪಿಂಚಣಿ ಮೊತ್ತ 4,800 ರೂಪಾಯಿಗಳಿಂದ 8,500 ರೂಪಾಯಿಗಳಿಗೆ ಮತ್ತು 23,940ರೂಪಾಯಿಗಳಿಂದ 45,180 ರೂಪಾಯಿಗಳಿಗೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೂಲ ಪಿಂಚಣಿ/ಕೌಟುಂಬಿಕ ಪಿಂಚಣಿ ಮತ್ತು ಡಿಎಗಳನ್ನು ಲೆಕ್ಕ ಹಾಕಿ ಜುಲೈ 1,2017ರಿಂದ ಪೂರ್ವಾನ್ವಯವಾಗುವಂತೆ ಶೇಕಡಾ 30ರಷ್ಟು ಮೂಲ ಪಿಂಚಣಿ/ಕೌಟುಂಬಿಕ ಪಿಂಚಣಿಯಲ್ಲಿ ಕೂಡ ಏರಿಕೆ ಮಾಡಲಾಗಿದೆ.

ವೇತನ ಮತ್ತು ಭತ್ಯೆಯಲ್ಲಿ ಹೆಚ್ಚಳವನ್ನು ಏಪ್ರಿಲ್ 1ರಿಂದ ನಗದು ರೂಪದಲ್ಲಿ ನೀಡಲಾಗುತ್ತದೆ. ಇದು ರಾಜ್ಯದ 5.2 ಲಕ್ಷ ನೌಕರರು, 5.73 ಲಕ್ಷ ಪಿಂಚಣಿದಾರರು ಮತ್ತು ಕೌಟುಂಬಿಕ ಪಿಂಚಣಿದಾರರು, 73 ಸಾವಿರ ಅನುದಾನಿತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಅನ್ವಯವಾಗಲಿದೆ.

SCROLL FOR NEXT