ಬೆಂಗಳೂರು: ವಿದೇಶದಿಂದ ತರಲಾಗಿದ್ದ ಎಲೆಕ್ಟ್ರಾನಿಕ್ ಸರಕುಗಳನ್ನು ರಿಲೀಸ್ ಮಾಡಲು 30 ಸಾವಿರ ರೂ.ಲಂಚ ಪಡೆದ ಆರೋಪದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧೀಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯೂ ತಿಪ್ಪಸಂದ್ರ ನಿವಾಸಿ ಬಿ.ಎಸ್ ಸಿಸ್ಟಮ್ಸ್‌ನ ಮಾಲೀಕರಾದ ಮುತ್ತುಕೃಷ್ಣನ್ ಎಂಬುವರು 11 ಕಾರು ಸ್ಟಿರಿಯೋಗಳು, 1 ಪಿಯಾನೋ ಮತ್ತು ಎರಡು ಮದರ್‌ಬೋರ್ಡ್‌ಗಳನ್ನು ಬ್ಯಾಂಕಾಕ್‌ನಲ್ಲಿ ಖರೀದಿಸಿದ್ದರು. ಬ್ಯಾಂಕಾಕ್‌ನಿಂದ ಶ್ರೀಲಂಕಾದ ಕೊಲಂಬೋಗೆ ತೆರಳಿ ಅಲ್ಲಿಂದ ಶ್ರೀಲಂಕನ್ ಏರ್‌ವೇಸ್ ಮೂಲಕ ಕೆಐಎ ಗೆ ಮಾರ್ಚ್ 1ರ ರಾತ್ರಿ ಬಂದಿದ್ದರು.
ವಲಸೆ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ಬಳಿಕ ತಮ್ಮ ಸರಕುಗಳನ್ನು ಸ್ವೀಕರಿಸಿ ಹೊರ ಬರುತ್ತಿದ್ದರು. ಈ ವೇಳೆ ಮುತ್ತುಕೃಷ್ಣನ್ ಅವರನ್ನು ತಡೆದ ಕರ್ತವ್ಯನಿರತ ಕಸ್ಟಮ್ಸ್ ಅಧೀಕ್ಷಕ ಶಫೀವುಲ್ಲಾ, ಸರಕನ್ನು ಬಿಡುಗಡೆ ಮಾಡಲು 30 ಸಾವಿರ ರೂ. ಲಂಚ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ತಮ್ಮ ಬಳಿ ಹಣ ಇಲ್ಲ ಎಂದು ಹೇಳಿದ ಮುತ್ತುಕೃಷ್ಣನ್, ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಂದ ಹಣ ಪಡೆದುಕೊಂಡು ಬರುವುದಾಗಿ ಹೇಳಿ ಸರಕುಗಳನ್ನು ಅಲ್ಲೇ ಇಟ್ಟು ಹೊರಗೆ ಬಂದಿದ್ದರು. ಅಲ್ಲಿಂದ ಸಿಬಿಐ ಕಚೇರಿಗೆ ತೆರಳಿ ಲಂಚದ ಕುರಿತು ಲಿಖಿತ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ದೂರುದಾರನಿಂದ ಲಂಚ ಪಡೆಯುವ ವೇಳೆ ಅಧೀಕ್ಷಕ ಶಫೀವುಲ್ಲಾ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಸಿಬಿಐ ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.