ರಾಜ್ಯ

ದತ್ತ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಿ: ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ

Shilpa D
ಬೆಂಗಳೂರು: ಮುಜರಾಯಿ ಆಯುಕ್ತರ ವರದಿ ಮತ್ತು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಬಾಬಾಬುಡನ್‌ಗಿರಿಯಲ್ಲಿ ಹಿಂದು ಅರ್ಚಕರ ನೇಮಕ ಮಾಡಿ ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ಸಮಿತಿ ಶಿಫಾರಸು ಆಧರಿಸಿ ಸರ್ಕಾರ ಕೈಗೊಂಡಿರುವ ನಿರ್ಧಾರ ಹಿಂದೂಗಳನ್ನು ದಿಕ್ಕು ತಪ್ಪಿಸುವ ತಂತ್ರ. ದತ್ತಪೀಠದ ಪೂಜೆಯ ಜವಾಬ್ದಾರಿಯನ್ನು ಅರ್ಚಕರಿಗೆ ನೀಡಬೇಕು ಎಂಬ ಎರಡು ತಲೆಮಾರಿನ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ ಹಿಂದೂಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದ್ದಾರೆ.
ದತ್ತಪೀಠದ ಉಸ್ತುವಾರಿ ಮೊದಲಿಂದಲೂ 1927ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲೇ ಇತ್ತು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೊರಗೆ ನೋಡುವುದಕ್ಕೆ ಇದು ಹಿಂದೂಗಳ ಪರ ನಿರ್ಧಾರ ಎಂದು ಬಿಂಬಿತವಾದರೂ ಒಳಗೆ ಇದು ಅಪ್ಪಟವಾಗಿ ಹಿಂದೂಗಳ ವಿರೋಧಿಯಾಗಿದೆ’ ಎಂದು ಜರಿದರು.
ಸ್ವಾತಂತ್ರ್ಯಪೂರ್ವದಿಂದಲೂ ಬಾಬಾಬುಡನ್‌ಗಿರಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲೇ ಇದೆ. ಆದರೆ, 'ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ' ಎಂದು ನಾಮಕರಣ ಮಾಡಲು ಸಂಪುಟದಲ್ಲಿ ತೀರ್ಮಾನಿಸಿರುವ ಸರಕಾರ, ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಇದನ್ನು ವಿರೋಧಿಸಿ ನ್ಯಾಯಾಂಗ ಹೋರಾಟ ನಡೆಸಲಾಗುವುದು. ಜನರಿಂದಲೂ ಸಂಕಲ್ಪ ಮಾಡಿಸಿ ದತ್ತ ಪೀಠ ಉಳಿಸಿ ಅಭಿಯಾನ ನಡೆಸಲಾಗುವುದು,'' ಎಂದು ಸ್ಪಷ್ಟವಾಗಿ ಹೇಳಿದರು.
''ಬಾಬಾಬುಡನ್‌ಗಿರಿಯಲ್ಲಿ ಅರ್ಚಕರ ನೇಮಕದ ನಿರ್ಧಾರವಾಗಬೇಕಿತ್ತು. ಈ ಬಗ್ಗೆ ಕೋರ್ಟ್‌ ಆದೇಶವೂ ಇದೆ. ಆದರೆ, ಜನರ ದಾರಿ ತಪ್ಪಿಸಲು ಸರಕಾರ ಹೊರಟಿದೆ. ಹೊರಗೊಂದು ಒಳಗುಂದು ನೀತಿ ಅನುಸರಿಸಿ ದತ್ತ ಪೀಠದಲ್ಲಿ ಮುಜಾವರ್‌ರನ್ನು ನೇಮಿಸಲು ಮುಂದಾಗಿದೆ. ಇದೇ ರೀತಿ ಮಸೀದಿ, ದರ್ಗಾಗಳಲ್ಲಿ ಹಿಂದೂ ಅರ್ಚಕರನ್ನು ನಿಯೋಜಿಸಲಾಗುತ್ತದೆಯೆ,'' ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರನ್ನು ಓಲೈಸುವ ಹಿತದೃಷ್ಟಿಯಿಂದ ಸಿದ್ದರಾಮಯ್ಯಸರ್ಕಾರದ ಹಿಂದೂ ವಿರೋದಿ ನೀತಿ ಅನುಸರಿಸುತ್ತಿದೆ, ಪ್ರಕರಣ ಸಂಬಂಧ ನಾವು ಕಾನೂನು ಬದ್ಧವಾಗಿ ಹೋರಾಟ ನಡೆಸುತ್ತೇವೆ, ಹಿಂದೂ ಅರ್ಚಕರನ್ನು ನೇಮಿಸದಿದ್ದರೇ ನಾವು ಬೃಹತ್ ಪ್ರತಿಭಟನೆ ನಡೆಸುವುದಾಗಿ ರವಿ ಎಚ್ಚರಿಸಿದ್ದಾರೆ. 
SCROLL FOR NEXT