ರಾಜ್ಯ

ಆಡಳಿತ ಕೇಂದ್ರಗಳಲ್ಲಿ ಭದ್ರತೆ ಬಿಗಿಗೊಳಿಸಿ ಸುತ್ತೋಲೆ ಹೊರಡಿಸಿದ ಸರ್ಕಾರ

Sumana Upadhyaya

ಬೆಂಗಳೂರು: ಲೋಕಾಯುಕ್ತ ಕಚೇರಿಗೆ ಆಗಮಿಸಿ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಎಚ್ಚೆತ್ತುಕೊಂಡಿರುವ ಸರ್ಕಾರ ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳ ಭದ್ರತೆಯನ್ನು ತೀವ್ರಗೊಳಿಸಿ ಸುತ್ತೋಲೆ ಹೊರಡಿಸಿದೆ.

ಲೋಕಾಯುಕ್ತರ ಕಚೇರಿಯಲ್ಲಿ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದ ಘಟನೆಯಿಂದಾಗಿ ಭದ್ರತಾ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆಯಿರುತ್ತದೆ. ಆದುದರಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿನ ಸಚಿವಾಲಯದ ಎಲ್ಲಾ ಕಚೇರಿಗಳು ಸೇರಿದಂತೆ ಸಾರ್ವಜನಿಕ ಪ್ರವೇಶವನ್ನು ನಿಗಗದಿತ ಸಂದರ್ಶಕರ ಭೇಟಿ ಸಮಯಕ್ಕೆ ಮಿತಿಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಸಾರ್ವಜನಿಕರನ್ನು ಕೂಡ ಕೂಲಂಕುಷ ತಪಾಸಣೆಗೊಳಪಡಿಸಿ ಮತ್ತು ಅವರ ಬ್ಯಾಗುಗಳನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿದ ನಂತರ ಲೋಹ ತಪಾಸಣಾ ಯಂತ್ರದ ಮೂಲಕ ಹಾದುಹೋಗಬೇಕೆಂಬ ನಿಯಮವನ್ನು ಕಟ್ಟುನಿಟ್ಟು ಮಾಡಲಾಗುವುದು. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

SCROLL FOR NEXT