ಬೆಂಗಳೂರು: ನಮ್ಮ ಮೋಟ್ರೋ ಸೇವೆಯನ್ನು ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ತರಲು ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ನಡೆಸಲು ಮುಂದಾಗಿದ್ದ ಮೆಟ್ರೋ ಸಿಬ್ಬಂದಿಗಳಿಗೆ ಭಾರೀ ಹಿನ್ನಡೆಯುಂಟಾದಂತಾಗಿದೆ.
ಖಾಯಂ ಆಧಾರದ ಮೇಲೆ ಅಥವಾ ಗುತ್ತಿಗೆ, ತಾತ್ಕಾಲಿಕ, ಹೊರಗುತ್ತಿಗೆ ಆಧಾರದ ಮೇಲೆ ಬಂದಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಅದು, ಸಾರ್ವಜನಿಕ ಉಪಯುಕ್ತ ಸೇವೆಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸಿಬ್ಬಂದಿಗಳ ಮುಷ್ಕರ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುವಂತಾಗುತ್ತದೆ ಎಂದು ಸೂಚನೆಯಲ್ಲಿ ಸರ್ಕಾರ ತಿಳಿಸಿದೆ.
ಮುಷ್ಕರಗಳಿಂದ ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನಲೆಯಲ್ಲಿ ಮೆಟ್ರೋ ಸಿಬ್ಬಂದಿಗಳ ಮೇಲೆ ಎಸ್ಮಾ ಜಾರಿ ಮಾಡುವಂತೆ ಬಿಎಂಆರ್'ಸಿಎಲ್'ಗೆ ಸರ್ಕಾರ ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಅಧಿಸೂಚನೆ ಮೂಲಕ ಮೆಟ್ರೋ ಅಗತ್ಯ ಸೇವೆಗಳನ್ನು ಎಸ್ಮಾ ಕಾಯ್ದೆಯಲ್ಲಿ ತರಲಾಗಿದೆ.. ಅಗತ್ಯಬಿದ್ದಾಗ ಯಾವಾಗ ಬೇಕಾದರೂ ಎಸ್ಮಾ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ.
ವೇತನ ಹೆಚ್ಚಳ, ಭವಿಷ್ಯ ನಿಧಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಬಿಎಂಆರ್'ಸಿಎಲ್ ನೌಕರರ ಸಂಘವು ಮಾರ್ಚ್. 22 ರಂದು ಮುಷ್ಕರ ನಡೆಸುವುದಾಗಿ ಕರೆ ನೀಡಿದೆ.