ರಾಜ್ಯ

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ವರ್ಗಾವಣೆಗೆ ಎಂಎಲ್ ಸಿಗಳ ಒತ್ತಾಯ

Sumana Upadhyaya

ಬೆಂಗಳೂರು: ರಾಜ್ಯದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಹಲವು ವಿಧಾನ ಪರಿಷತ್ ಸದಸ್ಯರು, ಖಾಸಗಿ ಶಾಲೆಗಳ ಒಕ್ಕೂಟಗಳು, ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ವರ್ಗಾಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಶಾಲಿನಿ ರಜನೀಶ್ ಅವರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ಮೊನ್ನೆ ಮೊನ್ನೆ 13ರಿಂದ 15 ದಿನಗಳ ದೀರ್ಘಾವಧಿ ರಜೆ ಮೇಲೆ ತೆರಳಿದ್ದಾರೆ. ಈಗ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಮಾರ್ಚ್ 23ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ, ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ಹಲವು ಕೆಲಸಗಳಿರುತ್ತವೆ. ಇಲಾಖೆಯ ಮುಖ್ಯಸ್ಥರಾಗಿ 15 ದಿನಗಳ ಕಾಲ ರಜೆ ಹಾಕಿ ತೆರಳುವುದು ಎಷ್ಟು ಸರಿ ಎಂದು ಎಂಎಲ್ ಸಿ ಪುಟ್ಟಣ್ಣ ಪ್ರಶ್ನೆ ಮಾಡಿದ್ದಾರೆ.

ಶಾಲಿನಿ ರಜನೀಶ್ ರಜೆ ಇರುವ ಕಾರಣ ಅವರ ಜವಾಬ್ದಾರಿಯನ್ನು ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ. ಈ ಹಿಂದೆ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಲವು ಉದಾಹರಣೆಗಳಿವೆ. ಇಂತಹ ವಿಷಯಗಳನ್ನು ಇಲಾಖೆಯ ಮುಖ್ಯಸ್ಥರು ನೋಡಿಕೊಳ್ಳಬೇಕಾಗುತ್ತದೆ, ಇಂತಹ ಮುಖ್ಯವಾದ ಕೆಲಸವಿರುವ ಸಮಯದಲ್ಲಿ ಅವರು ರಜೆ ಮೇಲೆ ಹೋಗಲು ಹೇಗೆ ಸಾಧ್ಯ? ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪುಟ್ಟಣ್ಣ ಪ್ರಶ್ನೆ ಮಾಡಿದ್ದಾರೆ.

ಪುಟ್ಟಣ್ಣ ಅವರ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯರು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲು ಮುಂದಾಗಿದ್ದಾರೆ. ಶಿಕ್ಷಣ ಸಚಿವರು ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ ಹಾಗೂ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT