ನೀರಾವರಿ ಸಚಿವ ಎಂ.ಬಿ ಪಾಟೀಲ್
ಬೆಂಗಳೂರು; ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡುವ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಐತಿಹಾಸಿಕ ನಿರ್ಣಯ ಎಂದು ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡುವ ಕುರಿತಂತೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನಿಕ್ಕ ಬಳಿಕ ನಗರದ ಖಾಸಗಿ ಹೋಟೆಲ್ ನಲ್ಲಿ ಸಚಿವ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿಯವರು ಜಂಟಿ ಪತ್ರಿಕಾಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರಿಬ್ಬರೂ ಸರ್ಕಾರದ ನಿರ್ಧಾರ ಐತಿಹಾಸಿಕ ನಿರ್ಣಯ ಎಂದು ತಿಳಿಸಿದರು.
ಸಚಿವ ಸಂಪುಟ ತೀರ್ಮಾನವು ರಾಜ್ಯದ ಇತಿಹಾಸದಲ್ಲಿಯೇ ಸ್ಮರಣೀಯ, ಐತಿಹಾಸಿಕ ದಿನ. ಬಸವಣ್ಣ ಹಾಗೂ ಶರಣರು ಮಾನವ ಧರ್ಮ ಹುಟ್ಟು ಹಾಕಿ, ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಪ್ರತಿಯೊಬ್ಬರೂ ಸಮಾನರು ಎಂದು ಸಾರಿದ್ದರು. 900 ವರ್ಷಗಳ ಬಳಿಕ ಮತ್ತೊಮ್ಮೆ ನಮ್ಮ ಮೂಲ ಧರ್ಮಕ್ಕೆ ಮಾನ್ಯತೆ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಕಾಯ್ದೆ ಸೆಕ್ಷನ್ 2ಡಿ ಅಡಿಯಲ್ಲಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾಡಲು ಶಿಪಾರಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಇಡೀ ಲಿಂಗಾಯತ ಸಮಾಜದ ಪರವಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ನಾವು ಅಲ್ಪಸಂಖ್ಯಾತ ಮೀಸಲಾತಿಗಾಗಿ ಹೋರಾಟ ನಡೆಸಿಲ್ಲ. ಬದಜಲಿಗೆ ಬಸವ ಧರ್ಮ ಜಾಗತಿಕ ಧರ್ಮವಾಗಬೇಕು ಎಂಬ ನಮ್ಮ ಆಶಯದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.