ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಿದ್ದ ಪ್ರತ್ಯೇಕ ಧರ್ಮ ವಿವಾದ ಕುರಿತಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಲಿಂಗಾಯತರ ಕಣ್ಣೊರೆಸುವ ತಂತ್ರವಾಗಲಿದೆಯೇ ಎಂಬ ಮಾತುಗಳು ಇದೀಗ ಕೇಳಿ ಬರತೊಡಗಿವೆ.
ಏಕೆಂದರೆ, ಸರ್ಕಾರ ಇದೀಗ ತೆಗೆದುಕೊಂಡಿರುವ ನಿರ್ಧಾರದಿಂದ ಲಿಂಗಾಯತರಿಗೆ ಅಷ್ಟು ಬೇಗ ಲಾಭಗಳು ಸಿಗುವುದಿಲ್ಲ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಇದು ಲಿಂಗಾಯತರ ಕಣ್ಣೊರೆಸುವ ತಂತ್ರವೆಂದೇ ಹೇಳಲಾಗುತ್ತಿದೆ.
ಲಿಂಗಾಯತರಿಗೆ ಧಾರ್ಮಿಕ ಅಲ್ಪ ಸಂಖ್ಯಾತ ಮಾನ್ಯತೆ ದೊರೆತರೂ ಮೀಸಲಾತಿ ವಿಚಾರದಲ್ಲಿ ಈಗಿರುವ ಪರಿಸ್ಥಿತಿಯೇ ಮುಂದವರೆಯಲಿದೆ ಹೊರತು ಹೆಚ್ಚಿನ ಲಾಭವೇನೂ ಆಗುವುದಿಲ್ಲ. ಬದಲಿಗೆ, ಅಲ್ಪಸಂಖ್ಯಾತ ಸ್ಥಾನಮಾನದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾತ್ರ ವಿಶೇಷ ಅವಕಾಶ ಲಭ್ಯವಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ ಮೀಸಲಾತಿ ವಾರು ಐಗು ಪ್ರವರ್ಗಗಳಿವೆ. ಪ್ರವರ್ಗ 1 ರ ಅಡಿ 95 ಜಾತಿ ಹಾಗೂ 8 ಮುಸ್ಲಿಂ ಸಮುದಾಯಗಳು ಬರುತ್ತವೆ. 2ಎ ವರ್ಗದಲ್ಲಿ ದಲಿತ ಕ್ರೈಸ್ತರು, ಬುದ್ಧರು, ಪ್ರವರ್ಗ 2ಬಿಯಲ್ಲಿ ಮುಸ್ಲಿಮರು, ಪ್ರವರ್ಗ 3ಬಿಯಲ್ಲಿ ಕ್ರೈಸ್ತರು, ಜೈನರು, ಲಿಂಗಾಯತರು ಇತರೆ ಜಾತಿಗಳು ಬರುತ್ತಾರೆ. 3ಎನಲ್ಲಿ ಒಕ್ಕಲಿಗರು, ಕೊಡವರು ಇತರೆ ಬರುತ್ತಾರೆ.
ಪ್ರಸ್ತುತ ಲಿಂಗಾಯತರು 3-ಬಿ ಪ್ರವರ್ಗದಲ್ಲಿದ್ದು, ಅಲ್ಪಸಂಖ್ಯಾತ ಮಾನೆಯತೆಯ ಬಳಿಕವೂ ಕ್ರೈಸ್ತರು, ಜೈನರ ಜತೊಯೇ ಅಲ್ಪ ಸಂಖ್ಯಾತರಾಗಿ 3-ಬಿ ಪ್ರವರ್ಗದಲ್ಲಿ ಮುಂದುವರೆಯುತ್ತಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳೂ ಸಹ ಹಿಂದುಳಿದ ವರ್ಗಗಳ ಅಡಿಯಲ್ಲೇ ಬರುವುದರಿಂದ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸಗಳಾಗುವುದಿಲ್ಲ ಎಂದು ಹೇಳಾಲಾಗುತ್ತಿದೆ.
ಪ್ರಸ್ತುತ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಕೇಂದ್ರಕ್ಕೆ ಶೀಘ್ರದಲ್ಲಿಯೇ ಶಿಫಾರಸು ಮಾಡುವುದಾಗಿ ತಿಳಿಸಿದೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.