ಬೆಂಗಳೂರು: ಚಾಕು ತೋರಿಸಿ ಮಹಿಳೆಗೆ ಬೆದರಿಕೆ, 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೊಡೆ
ಬೆಂಗಳೂರು: ಏಳು ದರೋಡೆಕೋರರ ಗುಂಪೊಂದು ಮನೆಗೆ ನುಗ್ಗಿ 40 ವರ್ಷದ ಮಹಿಳೆ ಹಾಗೂ ಮಕ್ಕಳನ್ನು ಕಟ್ಟಿ ಹಾಕಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಬೆಂಗಳೂರು ಕೊತ್ತನೂರು ಪೋಲೀಸ್ ಠಾಣೆ ವ್ಯಾಪ್ತಿಯ ಶಬರಿನಗರದಲ್ಲಿ ನಡೆದಿದೆ.
ಹೆಗಡೆ ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದ ಅನಿತಾ ಅವರ ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ತನ್ನ 14 ಮತ್ತು 15 ವರ್ಷ ವಯಸ್ಸಿನ ಮಕ್ಕಳು ಹಾಗೂ ಸೋದರಿಯೊಡನೆ ಅನಿತಾ ಮನೆಯಲ್ಲಿ ವಾಸವಿದ್ದರು. ಅವರ ಪತಿ ಮುಂಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ತಿಂಗಳಿಗೊಮ್ಮೆ ಆಗಮಿಸುತ್ತಿದ್ದರು.
ಸೋಮವಾರ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಸದ್ದಾದಾಗ ಅನಿತಾ ಬಾಗಿಲು ತೆರೆದಿದ್ದಾರೆ. ತಕ್ಷಣ ಒಳಗೆ ನುಗ್ಗಿದ ಏಳು ಜನರ ಗುಂಪು ಮುಂಬಾಗಿಲನ್ನು ಲಾಕ್ ಮಾಡಿ ಅನಿತಾ ಅವರ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ಡಾರೆ. ಇನ್ನೂ ಕೆಲವರು ಕೋಣೆಗೆ ನುಗ್ಗಿ ಅಲ್ಲಿದ್ದ ಮಕ್ಕಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಆ ಬಳಿಕ ಬೀರುವಿನಲ್ಲಿದ್ದ ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳನ್ನು ದೋಚಿದ ದರೋಡೆಕೋರರು ಅದೇ ವೇಳೆ ಮನೆಗೆ ಆಗಮಿಸಿದ್ದ ಅನಿತಾ ವರ ಅಣ್ಣನ ಮಗನನ್ನೂ ಕೋಣೆಗೆ ಎಳೆದೊಯ್ದು ಕಟ್ಯಿ ಹಾಕಿದ್ದಾರೆ. ಹಾಗೆ ದರೋಡೆ ನಡೆಸಿ ಹೊರಡುವ ವೇಳೆ ’ಪೋಲೀಸರಿಗೆ ತಿಳಿಸಿದರೆ ನಿಮ ಜೀವ ಉಳಿಯಲ್ಲ’ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ.
ಇಷ್ಟೆಲ್ಲಾ ಘಟನೆ ಹದಿನೈದು ದಿನಗಳಲ್ಲಿ ನಡೆದು ಹೋಗಿತ್ತು. ದರೋಡೆಕೋರರು ಹೊರಟ ಬಳಿಕ ಅನಿತಾ ತಮ್ಮ ನೆರೆಯವರಿಗೆ ಕೇಳಲಿ ಎಂದು ಜೋರಾಗಿ ನೆರವಿಗಾಗಿ ಅರಚಿಕೊಂಡಿದ್ದಾರೆ. ಅದಾಗ ನೆರೆಯವರು ಆಗಮಿಸಿ ಅನಿತಾ ಹಾಗೂ ಮಕ್ಕಳನ್ನು ಬಂಧಮುಕ್ತಗೊಳಿಸಿದ್ಡಾರೆ. ಬಳಿಕ ಘಟನೆ ಸಂಬಂಧ ಅನಿತಾ ಪೋಲೀಸರಿಗೆ ಮಾಹಿತಿ ನೀಡಿದ್ದು ಏಳು ಜನರಲ್ಲಿ ನಾಲ್ವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಅವರು ಹಿಂದಿ ಹಾಗೂ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕೊತ್ತನೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿ.ಸಿ.ಟಿ.ವಿ ದೃಶ್ಯ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics