ನಿರ್ಮಾಣ ಹಂತದಲ್ಲಿರುವ ಲಗ್ಗೆರೆ ಫ್ಲೈಓವರ್
ಬೆಂಗಳೂರು: ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲದ ಹೆಣ್ಣೂರು ಫ್ಲೈಓವರ್ ಹಾಗೂ ವಿಮಾನ ನಿಲ್ದಾಣ ಸಂಪರ್ಕ ರಸ್ತೆಯನ್ನು ,ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವೇ ದಿನಗಳ ಹಿಂದೆ ಉದ್ಘಾಟಿಸಿದ ಬೆನ್ನಲ್ಲಿ ಇದೀಗ ಲಗ್ಗರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇನ್ನೊಂದು ಫ್ಲೈಓವರ್ ಸಹ ಉದ್ಘಾಟನೆಗೊಂಡಿದೆ.
ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುವ ಜಾಯಮಾನ ಮುಂದುವರಿದಿದ್ದು ಲಗ್ಗರೆಯಲ್ಲಿ ಕಾಮಗಾರಿ ನಡೆಯುತ್ತಿರುವ ಫ್ಲೈಓವರ್ ಒಂದನ್ನು ಅಧಿಕಾರಿಗಳು ಗುರುವಾರ ಉದ್ಘಾಟಿಸಿದ್ದಾರೆ.
ಇಷ್ಟೇ ಅಲ್ಲದೆ ಗುರುವಾರ ಒಂದೇ ದಿನದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಧ ಕೆಲಸ ಮುಗಿದಿರುವ ಸುಮಾರು 83 ಅಭಿವೃದ್ಧಿ ಯೋಜನೆಗಳನ್ನು ಅಧಿಕಾರಿಗಳು ಲೋಕಾರ್ಪಣೆಗೊಳಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಶಾಸಕ ಮುನಿರತ್ನ, ಸಂಸದ ಡಿ.ಕೆ. ಸುರೇಶ್ ಇನ್ನಿತರರು ಲಗ್ಗರೆ, ಲಕ್ಷ್ಮಿ ದೇವಿ ನಗರದಲ್ಲಿನ ಫ್ಲೈಓವರ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.