ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರಗಳ ಪರಿಣಾಮಕಾರಿ ತಡೆಗೆ ತುರ್ತಾಗಿ ರಾಷ್ಟ್ರೀಯ ನೀತಿ ರೂಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯ ತಜ್ಞರ ಸಮಿತಿ ರಾಜ್ಯ ಸರಕಾರಕ್ಕೆ ಸಲಹೆ ಮಾಡಿದೆ.
ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರು, ಶೇ 38ರಷ್ಟು ಮಕ್ಕಳಿದ್ದಾರೆ. ಅವರ ರಕ್ಷಣೆಗೆ ಪೊಲೀಸ್, ವೈದ್ಯಕೀಯ, ಪ್ರಾಸಿಕ್ಯೂಷನ್, ನ್ಯಾಯಾಲಯ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಸಮಗ್ರ ನೀತಿ ಜಾರಿಗೆ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ವರದಿಯಲ್ಲಿ ಸಲಹೆ ಮಾಡಲಾಗಿದೆ ಎಂದರು.
ಸಮಿತಿಯು ಪ್ರಮುಖವಾಗಿ 135 ಶಿಫಾರಸುಗಳನ್ನು ಒಳಗೊಂಡ ಒಟ್ಟು 6,105 ಪುಟಗಳ ವರದಿಯನ್ನು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. ವರದಿ ಸಲ್ಲಿಕೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ''ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಎಲ್ಲ ರಾಜ್ಯಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿದೆ. ಶೇ.50 ಮಹಿಳೆಯರು ಹಾಗೂ ಶೇ.38 ಮಕ್ಕಳಿರುವ ನಮ್ಮ ಸಮಾಜದಲ್ಲಿ ಆರೋಗ್ಯಕರ ವ್ಯವಸ್ಥೆಗಾಗಿ ಈ ಬಹುಸಂಖ್ಯಾತ ಮಹಿಳೆ ಮತ್ತು ಮಕ್ಕಳಿಗೆ ಉತ್ತಮ ಬದುಕಿನ ಪರಿಸರ ರೂಪಿಸಿ ರಕ್ಷಣೆ ಒದಗಿಸಬೇಕಿದೆ. ಅದಕ್ಕಾಗಿ ಕೆಲವೊಂದು ಕಾಯಿದೆ, ಕಾನೂನುಗಳಿಗೆ ತಿದ್ದುಪಡಿ ಅಗತ್ಯವಿದ್ದು, ರಾಷ್ಟ್ರೀಯ ನೀತಿ ರೂಪಿಸುವಂತೆ ಸಮಿತಿ ಶಿಫಾರಸು ಮಾಡಿದೆ'' ಎಂದು ತಿಳಿಸಿದರು.
* ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ಮತ್ತು ವಿಚಾರಣೆಯನ್ನು ಗರಿಷ್ಠ ಒಂದು ವರ್ಷದ ಒಳಗೆ ಇತ್ಯರ್ಥಕ್ಕೆ ಕಾನೂನಿನಲ್ಲಿ ತಿದ್ದುಪಡಿ.
* ಪ್ರತಿ ಜಿಲ್ಲೆಯಲ್ಲೂ ವರ್ಷದೊಳಗೆ ವಿಶೇಷ ಕೋರ್ಟ್ ಸ್ಥಾಪನೆ, ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್ ಹುದ್ದೆಗಳಿಗೆ ಮಹಿಳೆಯರ ನೇಮಕ.
* ಅತ್ಯಾಚಾರ ಪ್ರಕರಣಗಳಲ್ಲಿ ಕೇಸು ದಾಖಲಾದ ಕೂಡಲೇ ಪರಿಹಾರದ ಮೊತ್ತದಲ್ಲಿ ಶೇ.25 ಹಾಗೂ ಔಷಧೋಪಚಾರ ವೆಚ್ಚ ನೀಡಬೇಕು. ಚಾರ್ಜ್‌ಶೀಟ್ ದಾಖಲಾದಾಗ ಶೇ.25 ಪರಿಹಾರ ಮೊತ್ತ ನೀಡಬೇಕು. ಪ್ರಕರಣ ಇತ್ಯರ್ಥವಾದ ಬಳಿಕ ಉಳಿದ ಶೇ.50 ಪರಿಹಾರ ಮೊತ್ತ ನೀಡಲು ಕಾನೂನು.
* ಕೋರ್ಟ್‌ನಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಮತದಾನದ ಹಕ್ಕನ್ನು ಶಾಶ್ವತವಾಗಿ ರದ್ದುಮಾಡಬೇಕು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.
* ಲೈಂಗಿಕ ಕ್ರಿಯೆಗಳಿಂದ ಆಗುವ ದುಷ್ಪರಿಣಾಮಗಳ ಮಾಹಿತಿ ನೀಡಲು ಶಾಲಾ-ಕಾಲೇಜು ಪಠ್ಯದಲ್ಲಿ ದೇಹಶಾಸ್ತ್ರ ಶಿಕ್ಷಣ ಅಳವಡಿಸಬೇಕು. ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಿಗೇ ವ್ಯಾಸಂಗ ಮಾಡಲು ಸಹಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣ ನೀತಿ.
* ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ಪ್ರತಿ ತಾಲೂಕಿನಲ್ಲಿ ಒಂದು ವರ್ಷದಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥ್ಥಾಪನೆ, ಮಹಿಳಾ ಠಾಣಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ನೇಮಕ.
* ಪ್ರತಿ ಪೊಲೀಸ್ ಠಾಣೆ ಕಾರ್ಯವೈಖರಿ ಪರಿಶೀಲನೆಗೆ ವಿಜಿಲೆನ್ಸ್ ಕಮಿಟಿ ರಚನೆ.
* ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾದರೆ ಸಂಬಂಧಿತ ತನಿಖಾಧಿಕಾರಿ, ಪ್ರಾಸಿಕ್ಯೂಟರ್ ಮತ್ತು ಎಸ್ಪಿಯನ್ನು ಹೊಣೆಗಾರರಾಗಿ ಮಾಡುವ ಕಾನೂನು ರೂಪಿಸಬೇಕು.
* ಸಂತ್ರಸ್ತೆ ಚಿಕಿತ್ಸೆಗೆ ದಾಖಲಾದಾಗ ಚಿಕಿತ್ಸೆ, ಕಾನೂನು ಸಲಹೆಹಾಗೂ ಆತ್ಮಸ್ಥೈರ್ಯ ತುಂಬುವ ಸಮಾಲೋಚನೆ ವ್ಯವಸ್ಥೇ ಒಂದೇ ಸೂರಿನಡಿ ನಡೆಯಬೇಕು.
* ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯರು ಮತ್ತು ಎಫ್‌ಎಸ್‌ಎಲ್ ವರದಿಯನ್ನು ಒಂದೆರಡು ವಾರಗಳಲ್ಲಿ ಸಲ್ಲಿಸುವುದನ್ನು ಕಡ್ಡಾಯ ಮಾಡಬೇಕು ಮತ್ತು ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಎಫ್‌ಎಸ್‌ಎಲ್ ಪ್ರಯೋಗಾಲಯ ಸ್ಥಾಪಿಸಬೇಕು.
* ಅತ್ಯಾಚಾರ, ಪೋಕ್ಸೋ, ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಪೊಲೀಸ್ ಅಥವಾ ಸರಕಾರಿ ಅಧಿಕಾರಿಗಳು ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೆ ಅವರನ್ನು ಅಬೇಟರ್ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಬೇಕು.
* ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರತಿವರ್ಷ ಮಹಿಳೆ ಮತ್ತು ಮಕ್ಕಳ ಸಮೀಕ್ಷೆ ನಡೆಸಬೇಕು. ತಿಂಗಳಿಗೊಮ್ಮೆ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಿಚಾರದಲ್ಲಿ ಜನಜಾಗೃತಿ ಸಭೆ ನಡೆಸಬೇಕು.
* ಅಂತರ್ಜಾತಿ, ಅನ್ಯ ಧರ್ಮ ವಿವಾಹವಾಗುವ ಯುವಕ- ಯುವತಿಯರಿಗೆ ಕಡ್ಡಾಯವಾಗಿ ಪೊಲೀಸ್ ರಕ್ಷಣೆ ನೀಡಬೇಕು. ಅಡ್ಡಿಪಡಿಸುವುದು ಶಿಕ್ಷಾರ್ಹ ಎಂದು ಪರಿಗಣಿಸುವ ಕಾನೂನು ರೂಪಿಸಬೇಕು.
* ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ 'ಮಹಿಳೆ ಮತ್ತು ಮಕ್ಕಳನ್ನು ಗೌರವಿಸಿ: ದೌರ್ಜನ್ಯದಿಂದ ಮುಕ್ತಗೊಳಿಸಿ' ಎಂಬ ಸಂದೇಶ ನೀಡುವ ವ್ಯವಸ್ಥೆ ಮಾಡಬೇಕು. ಎಂದು ಶಿಫಾರಸು ಮಾಡಲಾಗಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos