ಬೆಂಗಳೂರು: ಅತಿಯಾದ ವೇಗ ಸಾವಿಗೆ ಕಾರಣ. ಈ ಪ್ರಸಿದ್ಧ ಮಾತನ್ನ ಹಲವು ಮೋಟಾರು ಬೈಕ್ ಸವಾರರು ಮರೆತಂತೆ ಕಾಣುತ್ತಿದೆ. ರಾಜ್ಯದ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದಾಗಿ ಪ್ರತಿಗಂಟೆಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವೇಗವಾಗಿ ವಾಹನ ಚಲಾಯಿಸುವ ಮೂಲಕ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.
ಏಳು ವರ್ಷದ ಮಾಹಿತಿ ಪ್ರಕಾರ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ ಗಂಟೆಗೆ 27 ಮಂದಿ ಸಾವನ್ನಪ್ಪುತ್ತಿರುವುದು ಪೊಲೀಸ್ ಇಲಾಖೆಯಿಂದ ತಿಳಿದುಬಂದಿದೆ.
ರಸ್ತೆಗಳು ಚೆನ್ನಾಗಿದ್ದರೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರಿಯಾಗಿ ತರಬೇತಿ ಪಡೆಯದೇ ಅಜಾಗರೂಕವಾಗಿ ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳು ಉಂಟಾಗುತ್ತಿವೆ ಎಂದು ತಜ್ಞರು ಆರೋಪಿಸುತ್ತಾರೆ.
ಲಭ್ಯವಿರುವ ಮಾಹಿತಿ ಪ್ರಕಾರ 2017 ರಲ್ಲಿ ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ ಸಂಭವಿಸಿದ್ದ 120 ಅಪಘಾತಗಳಲ್ಲಿ ಸುಮಾರು 153 ಮಂದಿ ಪ್ರತಿದಿನ ಗಾಯಗೊಳ್ಳುತ್ತಿದ್ದಾರೆ. ಸರಾಸರಿಯಂತೆ ಪ್ರತಿನಿತ್ಯ 28 ಜನರು ರಾಜ್ಯಹೆದ್ದಾರಿಗಳಲ್ಲಿ 10 ಜನರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವನ್ನಪ್ಪಿದ್ದಾರೆ.
2011 ಮತ್ತು 2017 ರ ಮಧ್ಯ ರಾಜ್ಯದಲ್ಲಿ 3 ಲಕ್ಷ ಅಪಘಾತಗಳಾಗಿವೆ. ಈ ಮಧ್ಯೆ 71,287 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 3.91 ಲಕ್ಷ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹೆದ್ದಾರಿಗಳಲ್ಲಿ ನಮ್ಮ ರಸ್ತೆಗಳು ಶೇ.3 ರಷ್ಟಿದ್ದರೂ ಶೇ. 60 ರಷ್ಟು ಅಪಘಾತಗಳಾಗುತ್ತಿವೆ. ಸುರಕ್ಷಿತೆಗಿಂತಲೂ ವೇಗಕ್ಕೆ ತಕ್ಕಂತೆ ರಸ್ತೆ ವಿನ್ಯಾಸಗೊಳಿಸಿರುವುದಕ್ಕೆ ಇದಕ್ಕೆ ಕಾರಣ ಎನ್ನುತ್ತಾರೆ ಸಂಚಾರಿ ತಜ್ಞ ಎಂ.ಎನ್, ಶ್ರೀಹರಿ
ಮತ್ತೊಂದೆಡೆ ಪರಾವನಗಿ ನೀಡುವಲ್ಲಿ ಮಾರ್ಪಾಡು ಮಾಡಬೇಕಿದೆ ಎಂದು ಐಐಎಸ್ ಸಿ ಪ್ರೋಫೆಸರ್ ಅಶಿಶ್ ವರ್ಮಾ ಆಗ್ರಹಿಸುತ್ತಾರೆ.
ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ನಿಯಂತ್ರಿಸಲು ಹಲವು ಕ್ರಮ ಕೈಗೊಂಡಿರುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಈ ಉದ್ದೇಶಕ್ಕಾಗಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ರಸ್ತೆಗನುಗುಣವಾಗಿ ವೇಗದ ಮಿತಿ ಜಾರಿಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಸ್ಪೀಡ್ ಗೌರ್ನರ್ ನ್ನು ಕಡ್ಡಾಯಗೊಳಿಸಲಾಗಿದೆ. ಗಂಟೆಗೆ 80 ಕಿಲೋ ಮೀಟರ್ ಗೂ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಅಪಾಯಕಾರಿ ವಾಹನಗಳ ಮಿತಿಯನ್ನು ಗಂಟೆಗೆ 60 ಕಿಲೋಮೀಟರ್ ನಿಗದಿಗೊಳಿಸಲಾಗಿದೆ ಎಂದು ಬಿ. ದಯಾನಂದ್ ತಿಳಿಸಿದ್ದಾರೆ.