ಬೆಂಗಳೂರಿನಲ್ಲಿ ಮತ್ತೆ ಪೊಲೀಸ್ ಫೈರಿಂಗ್: ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು
ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿ ಶೀಟರ್ ಗಳ ವಿರುದ್ಗ ಪೊಲೀಸರ ಬಂದೂಕು ಮಾತನಾಡಿದ್ದು, ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿ ಶೀಟರ್ ಗಳ ವಿರುದ್ಗ ಪೊಲೀಸರ ಬಂದೂಕು ಮಾತನಾಡಿದ್ದು, ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ್ದಾರೆ.
ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಲ ಅಲಿಯಾಸ್ ರೂಪೇಶ್ ಎಂಬ ರೌಡಿಶೀಟರ್ ನನ್ನು ಹುಡುಕುತ್ತದ್ದ ಪೊಲೀಸರಿಗೆ ಆತ ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಿಂಕೆ ಪಾರ್ಕ್ ಸಮೀಪದ ಪಾಳುಬಿದ್ದ ಮನೆಯಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿದೆ. ಕೂಡಲೇ ಅಲರ್ಟ್ ಆದ ಕಾಟನ್ ಪೇಟೆ ಪೊಲೀಸರು ಚಾಮರಾಜ ಪೇಟೆ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಜಿಂಕೆ ಪಾರ್ಕ್ ಬಳಿ ಪಾಳುಬಿದ್ದ ಮನೆಯಲ್ಲಿ ಈತನಿರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಮುಂದಾದ ವೇಳೆ ಕಾಟನ್ಪೇಟೆ ಠಾಣೆಯ ಪೇದೆ ಕುಮಾರ್ಗೆ ಆರೋಪಿ ನಿರ್ಮಲ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಹಿಡಿಯಲು ಚಾಮರಾಜಪೇಟೆ ಇನ್ಸ್ಪೆಕ್ಟರ್ ಪ್ರಶಾಂತ್ ಹಾಗೂ ಕಾಟನ್ಪೇಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿಯಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ರೌಡಿಶೀಟರ್ ಎಡಗಾಲಿಗೆ ಒಂದು ಗುಂಡು ಹೊಕ್ಕಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೂಪೇಶ್ ಜತೆಯಿದ್ದ ಮತ್ತೊಬ್ಬ ಆರೋಪಿ ಕಿಚ್ಚ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ರೂಪೇಶ್ ಮತ್ತು ಆತನ ಗ್ಯಾಂಗ್ ಅತುಷ್ ಎಂಬಾತನ ಹತ್ಯೆಗೆ ಸಂಚು ರೂಪಿಸಿದ್ದರು. ಅತುಷ್ ಕೂಡ ಕಾಟನ್ ಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ರೂಪೇಶ್ ಮೇಲೆ ವಾರಂಟ್ ಜಾರಿ ಮಾಡಿದ್ದರು. ರೂಪೇಶ್ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.