ರಾಜ್ಯ

ವೋಟ್ ಮಾಡಿ ಹೊಟೆಲ್, ಮಾಲ್ ಬಿಲ್ ಗಳಲ್ಲಿ ರಿಯಾಯಿತಿ ಪಡೆಯಿರಿ!

Srinivasamurthy VN
ಬೆಂಗಳೂರು: ನಗರದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಬಿಬಿಎಂಪಿ ಮತ್ತು ಚುನಾವಣಾ ಆಯೋಗ ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದು, ಇದರ ಅಂಗವಾಗಿ ಇದೀಗ ಮತದಾರರಿಗೆ ಹೊಟೆಲ್ ಮತ್ತು ಮಾಲ್ ಗಳಲ್ಲಿ ರಿಯಾಯಿತಿ ನೀಡಲು ಮುಂದಾಗಿದೆ.
ಮತದಾನ ಮಾಡಿದವರಿಗೆ ಶಾಪಿಂಗ್‌ ಮಾಲ್‌, ಸಿನಿಮಾ ಟಿಕೆಟ್‌, ಹೋಟೆಲ್‌ಗಳಲ್ಲಿ ರಿಯಾಯಿತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಅವರು, 'ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಶೇ. 52.40ರಷ್ಟು ಮತದಾನವಾಗಿತ್ತು. ಈ ಪ್ರಮಾಣವನ್ನು ಜಾಸ್ತಿ ಮಾಡಲು ಹಲವಾರು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮತದಾನದ ಗುರುತಿಗಾಗಿ ಬೆರಳಿಗೆ ಹಾಕಿರುವ ಶಾಯಿ ತೋರಿಸಿದವರಿಗೆ ತಿಂಡಿ ತಿನಿಸು, ಸಿನಿಮಾ ಟಿಕೆಟ್‌ ಮತ್ತು ಶಾಪಿಂಗ್‌ ಮಾಲ್‌ಗಳಲ್ಲಿ ಖರೀದಿಸುವ ವಸ್ತುಗಳಿಗೆ ರಿಯಾಯಿತಿ ದೊರಕಿಸಿಕೊಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಹೋಟೆಲ್‌, ಶಾಪಿಂಗ್‌ ಮಾಲ್‌ ಮತ್ತು ಸಿನಿಮಾ ಮಂದಿರಗಳ ಮಾಲೀಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಅಂತೆಯೇ, 'ಇದೇ ಶನಿವಾರ ಹೋಟೆಲ್‌, ಶಾಪಿಂಗ್‌ ಮಾಲ್‌ ಮತ್ತು ಸಿನಿಮಾ ಮಂದಿರಗಳ ಮಾಲೀಕರ ಸಭೆ ಕರೆಯಲಾಗಿದ್ದು, ಸಭೆ ಬಳಿಕ ಮತದಾನ ಮಾಡಿದವರಿಗೆ ರಿಯಾಯಿತಿ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ಶೇಕಡ ಎಷ್ಟು ರಿಯಾಯಿತಿ ನೀಡಬೇಕು ಎಂಬುದರ ಬಗ್ಗೆ ಮಾಲೀಕರೇ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ. ಶೇ 5 ರಿಂದ 10ರವರೆಗೆ ರಿಯಾಯಿತಿ ಘೋಷಿಸುವ ಸಾಧ್ಯತೆಗಳಿವೆ. ಮತದಾನದ ದಿನದಂದು ಜನರು ನಗರ ಬಿಟ್ಟು ಹೋಗದಂತೆ ತಡೆಯಲು ಮತ್ತು ಮತದಾನಕ್ಕೆ ಪ್ರೇರೇಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮತಗಟ್ಟೆಗಳಿಗೆ ಮಾರ್ಗ ತೋರುವ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಮನೆ ಮನೆಗೆ ವೋಟರ್‌ ಸ್ಲಿಪ್‌ ಮತ್ತು ಮಾರ್ಗದರ್ಶಿ ಕೈಪಿಡಿಯನ್ನು ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.
SCROLL FOR NEXT