ಬಿಜೆಪಿ ದಲಿತರ ಸಂವಾದದಲ್ಲಿ ಪ್ರತಿಭಟನೆ: ಸಚಿವ ಹೆಗಡೆ ಕೈಬಿಡುವಂತೆ ಅಮಿತ್ ಶಾಗೆ ಆಗ್ರಹ
ಮೈಸೂರು: ಮೈಸೂರಿನಲ್ಲಿ ದಲಿತ ನಾಯಕರ ಜೊತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ನಡೆಸಿದ್ದ ಸಂವಾದದಲ್ಲಿ ಭಾರೀ ಗದ್ದಲ ಹಾಗೂ ಗಲಾಟೆಗಳು ನಡೆದಿದೆ.
ಸಂವಿಧಾನ ಬದಲಾಯಿಸುವ ಹಾಗೂ ಜ್ಯಾತ್ಯಾತೀತರೆಲ್ಲರೂ ನಾಯಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಭಾರೀ ಆಕ್ರೋಶಗಳವು ವ್ಯಕ್ತವಾಗಿದ್ದು, ಹೆಗಡೆಯವರನ್ನು ಸಚಿವ ಸ್ಥಾನದಿಂದ ಕೆತ್ತೊಗೆಯುವಂತೆ ಆಗ್ರಹಗಳು ವ್ಯಕ್ತವಾದವು.
ಸಂವಾದದ ವೇಳೆ ಸುಮಾರು 10 ನಿಮಿಷಗಳ ವರೆಗೂ ಪ್ರತಿಭಟನೆ ಹಾಗೂ ಗದ್ದಲಗಳು ಎದುರಾಗಿತ್ತು. ಚಿರನಹಳ್ಳಿ ಶಿವಣ್ಣ ಹಾಗೂ ವಿಜಯ್ ಕುಮಾರ್ ಅವರು ಹೆಗಡೆಯವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ, ಅಮಿತ್ ಶಾ ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಈ ವೇಳೆ ಅಮಿತ್ ಶಾ ಅವರು ಎಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರತಿಭಟನಾ ನಿರತರು ಕೇಳದೆಯೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಬಳಿಕ ಮಧ್ಯೆಪ್ರವೇಶಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ವೇದಿಕೆಯಿಂದ ಹೊರಗೆ ಕಳುಹಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಬಳಿಕ ಸ್ಪಷ್ಟನೆ ನೀಡಿದ ಅಮಿತ್ ಶಾ ಅವರು, ಹೆಗಡೆಯವರ ಹೇಳಿಕೆಯಲ್ಲಿ ಬಿಜೆಪಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಲಿತರ ಪರ ಕಾರ್ಯಕ್ರಮಗಳಾದ ನಾಗ್ಪುರದಲ್ಲಿನ ದೀಕ್ಷಾ ಭೂಮಿ, ಮುಂಬೈ, ನವದೆಹಲಿ ಹಾಗೂ ಲಂಡನ್ ನಲ್ಲಿ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಗಳನ್ನು ಪಟ್ಟಿ ಮಾಡಿದರು.
ಇದೇ ವೇಳೆ ರೈಲ್ವೇ ಇಲಾಖೆಯಲ್ಲಿ ದಲಿತರ ನೇಮಕಾತಿ ವಿಚಾರದಲ್ಲಿ ಮೂಡಿರುವ ಗೊಂದಲಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಸಂಬಂಧ ಪ್ರಧಾನಿ ಮೋದಿಯವರು ಸ್ವತಃ ಮಧ್ಯೆಪ್ರವೇಶ ಮಾಡಿದ್ದಾರೆ. 40 ದಿನಗಳಲ್ಲಿ ರೈಲ್ವೆ ಇಲಾಖೆ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದಿದ್ದಾರೆ.