ಬೆಂಗಳೂರು: ಮತದಾನದ ಮಹತ್ವ ಸಾರುವುದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಮತದಾನ ಮಾಡಿದವರಿಗೆ ಬೈಕ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹರಸಾಹಸ ಪಡುತ್ತಿದೆ. ಅಂತೆಯೇ ಇದಕ್ಕೆ ಸಾಥ್ ನೀಡುವಂತೆ ಕೆಲ ಸ್ಥಳೀಯ ಸಂಸ್ಥೆಗಳು, ವ್ಯಕ್ತಿಗಳು, ಚಿತ್ರನಟ-ನಟಿಯರು ಮತದಾನದ ಮಹತ್ವ ಸಾರುತ್ತಿದ್ದಾರೆ. ಅಂತೆಯೇ ಮತದಾನ ಮಾಡಿದವರಿಗೆ ತಿಂಡಿ ಉಚಿತವಾಗಿ ನೀಡುವ ಹೊಟೆಲ್ ಸುದ್ದಿ ಬೆನ್ನಲ್ಲೇ ಇದೀಗ ಮತದಾನ ಮಾಡಿದವರಿಗೆ ಬೈಕ್ ಅನ್ನು ಉಚಿತವಾಗಿ ನೀಡುವ ಸುದ್ದಿಯೊಂದು ವೈರಲ್ ಆಗುತ್ತಿದೆ.
ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿ ನಗರದ ನಿವಾಸಿ ಶ್ರೀನಿವಾಸ್ ಅವರು ಇಂತಹುದೊಂದು ಬಂಪರ್ ಆಫರ್ ನೀಡಿದ್ದು, ಮತದಾನ ಮಾಡಿದ 10 ಅದೃಷ್ಟಶಾಲಿಗಳಿಗೆ ಬೈಕ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆ ಮತದಾನ ಮಾಡಿ, ಬಳಿಕ ಚುನಾವಣಾ ಅಧಿಕಾರಿಗಳು ನಿಮ್ಮ ಕೈ ಬೆರಳಿಗೆ ಹಾಕಿರುವ ಶಾಹಿ ಸಮೇತ ಪೋಟೋ ತೆಗಿಸಿಕೊಂಡು ಆ ಫೋಟೋವನ್ನು ಶ್ರೀನಿವಾಸ್ ಅವರಿಗೆ ಕಳುಹಿಸಿದರೆ ಲಕ್ಕಿ ಡ್ರಾ ಮೂಲಕ 10 ಅದೃಷ್ಟಶಾಲಿಗಳಿಗೆ ಉಚಿತ ಬೈಕ್ ನೀಡುತ್ತಾರಂತೆ.
ಶ್ರೀನಿವಾಸ್ ಅವರು ಹೇಳಿರುವಂತೆ ಮತದಾನ ಮಾಡಿ ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ಅದೃಷ್ಟಶಾಲಿಗಳಿಗೆ ಹೊಸ ಬಜಾಜ್ ಸಿಟಿ 110ಬಿ ಬೈಕ್ ಅನ್ನು ಉಚಿತವಾಗಿ ನೀಡಲಿದ್ದಾರಂತೆ.
ಫೋಟೋ ಕಳುಹಿಸುವ ಪ್ರಕ್ರಿಯೆ ಹೇಗೆ?
ಮೇ 12ರಂದು ನಡೆಯುವ ಮತದಾನದಂದು ನೋಟಾ ಕೂಡ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು. ಬಳಿಕ ನಿಮ್ಮ ಕೈಗೆ ಹಾಕಿರುವ ಶಾಹಿಯೊಂದಿಗೆ ಫೋಟೋ ತೆಗೆಸಿಕೊಂಡು ಅದನ್ನು 50 ದಿನಗಳ ಒಳಗಾಗಿ ಅಂದರೆ ಜೂನ್ 30ರ ಒಳಗಾಗಿ ವಾಟ್ಸಪ್ ಮೂಲಕ ಫೋಟೋ ಕಳುಹಿಸಬೇಕು. ವಾಟ್ಸಪ್ ಸಂಖ್ಯೆ 9590095900 ಈ ಸಂಖ್ಯೆಗೆ ಫೋಟೋವನ್ನು ವಾಟ್ಸಪ್ ಮಾಡಬೇಕು. ಆಗ ನಿಮ್ಮ ವಾಟ್ಸಪ್ ಸಂಖ್ಯೆಯ ಕೊನೆಯ ಐದು ಸಂಖ್ಯೆಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಆ ಲಕ್ಕಿ ಡ್ರಾದ ಸಂಪೂರ್ಣ ಪಾರದರ್ಶಕತೆ ಕಾಪಾಡಲು ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ಬಳಿಕ ಜುಲೈ 10 ಲಕ್ಕಿ ಡ್ರಾ ಮೂಲಕ 10 ಅದೃಷ್ಟ ಶಾಲಿ ಮತದಾರರನ್ನು ಆಯ್ಕೆ ಮಾಡಲಾಗುತ್ತದೆ. ಆ ಮೂಲಕ ಲಕ್ಕಿ ಡ್ರಾ ಗೆದ್ದವರಿಗೆ 10 ಬಜಾಜ್ 110 ಬಿ ಬೈಕ್ ಅನ್ನು ವಿತರಿಸಲಾಗುತ್ತದೆ.
ಒಟ್ಟಾರೆ ರಾಜ್ಯಾದ್ಯಂತ ಮತದಾನದ ಮಹತ್ವ ಸಾರಲು ಹಲವರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು, ಪ್ರಜ್ಞಾವಂತರಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯ...