ಮಂಗಳೂರು: ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಧರ್ಮಸ್ಥಳ, ಶೃಂಗೇರಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿರುವ ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರೈತರ ಸಾಲ ಮನ್ನಾ, ಎತ್ತಿನ ಹೊಳೆ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ದರ್ಶನ ಪಡೆದ ಬಳಿಕ ಮಾತನಾಡಿರುವ ಕುಮಾರಸ್ವಾಮಿ ಪೂರ್ಣ ಬಹುಮತ ಬಂದರೆ ಸಾಲ ಮನ್ನಾ ಮಾದುವುದಾಗಿ ಹೇಳಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ನೀಡಿಲ್ಲ, ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸಿದ ಬಳಿಕ ರೈತರ ಸಾಲ ಮನ್ನಾ, ಲೋಕಾಯುಕ್ತ, ಎತ್ತಿನ ಹೊಳೆ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಎತ್ತಿನ ಹೊಳೆ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮ ತಡೆಯುತ್ತೇನೆ ಎಂದು ಹೇಳಿದ್ದೆ. ಪ್ರಕೃತಿ ನಾಶವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕರಾವಳಿ ಭಾಗದ ಯುವಕರು ಸಮಾಜಘಾತುಕ ಶಕ್ತಿಗಳನ್ನು ಎದುರಿಸಿದಾಗ ತಮ್ಮನ್ನು ಸಂಪರ್ಕಿಸುವಂತೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕರೆ ನೀಡಿದ್ದಾರೆ.