ರಾಜ್ಯ

ಗಾಳಿ ಸುದ್ದಿ ನಂಬಿ ಪೋಷಕರ ಆತಂಕ, ಅಮಾಯಕರ ಮೇಲೆ ಹಲ್ಲೆ!

Srinivasamurthy VN
ಬೆಂಗಳೂರು: ಮಕ್ಕಳ ಕಳ್ಳರು ರಾಜ್ಯಕ್ಕೆ ಆಗಮಿಸಿದ್ದು, ಮಕ್ಕಳ ಅಂಗಾಂಗಗಳನ್ನು ಕಿತ್ತು ಮಾರುತ್ತಿದ್ದಾರೆ ಎಂಬ ಗಾಳಿಸುದ್ದಿ ಇದೀಗ ಪೋಷಕರ ಆತಂಕಕ್ಕೆ ಕಾರಣವಾಗಿದ್ದು, ಇದೇ ಆತಂಕ ಇದೀಗ ಒಂದು ಅಮಾಯಕ ಜೀವವನ್ನು ಬಲಿತೆಗೆದುಕೊಂಡಿದೆ.
ಇತ್ತೀಚೆಗಷ್ಟೇ ಗಡಿ ಜಿಲ್ಲೆ ಪಾವಗಡದಲ್ಲಿ ಮಕ್ಕಳ ಕಳ್ಳರ ಭೀತಿಯಿಂದ ರಾತ್ರಿ ಇಡೀ ಪೋಷಕರು ನಿದ್ರೆ ಇಲ್ಲದೇ ಮಕ್ಕಳ ಕಾದಿದ್ದರು, ಅಲ್ಲದೆ ಅನುಮಾನ ಬಂದ ಪ್ರತೀ ವ್ಯಕ್ತಿಯನ್ನೂ ಬೆನ್ನಟ್ಟಿ ಹಿಡಿದ ಥಳಿಸುತ್ತಿದ್ದರು. ಈ ಪ್ರಕರಣ ಹಸಿರಾಗಿರುವಂತೆಯೇ ಇತ್ತೀಚೆಗೆ ದಂಡುಪಾಳ್ಯ-4 ಚಿತ್ರತಂಡಕ್ಕೂ ಇದರ ಬಿಸಿ ತಟ್ಟಿತ್ತು. ದಂಡುಪಾಳ್ಯ ಚಿತ್ರಕ್ಕಾಗಿ ವಿಚಿತ್ರ ಕೇಶವಿನ್ಯಾಸ ಮಾಡಿಕೊಂಡಿದ್ದ ನಟರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿತ್ತು. 
ಇದರ ಬೆನ್ನಲ್ಲೇ ನಿನ್ನೆ ಚಾಮರಾಜಪೇಟೆಯಲ್ಲಿ ಇದೇ ಪೋಷಕರ ಆತಂಕ ಅಮಾಯಕ ಜೀವವೊಂದರ ಬಲಿತೆಗೆದುಕೊಂಡಿದೆ. ಕಾಲುರಾಮ್ ಎಂಬ ರಾಜಸ್ಥಾನದ ಯುವಕ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ. ಅತನ ಅನುಮಾನಾಸ್ಪದ ನಡೆಯನ್ನು ಕಂಡು ಆತ ಮಕ್ಕಳ ಕಳ್ಳ ಎಂದು ಭಾವಿಸಿ ಆತನನ್ನು ಹಿಡಿದು ಥಳಿಸಿ ಕೊಂದು ಹಾಕಲಾಗಿದೆ. ಪೊಲೀಸರು ಪೋಷಕರಿಗೆ ಮತ್ತು ಸ್ಥಳೀಯರಿಗೆ ಏಷ್ಟೇ ಮಾಹಿತಿ ನೀಡಿದರೂ ಈ ಬಗ್ಗೆ ಎಚ್ಚೆತ್ತುಕೊಳ್ಳದ  ಜನ ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. 
ಅಮಾಯಕರ ಮೇಲೆ ಹಲ್ಲೆಗೆ ಕಾರಣವಾಗುತ್ತಿದೆ ಸಾಮಾಜಿಕ ಜಾಲತಾಣ
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳೂ ಕೂಡ ಅಮಾಯಕರ ಮೇಲಿನ ಹಲ್ಲೆಗೆ ಕಾರಣವಾಗುತ್ತಿದೆ. ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಕೊಂದು ಅಂಗಾಂಗ ಮಾರುತ್ತಾರೆ ಎಚ್ಚರಿಕೆ ಎಂಬ ಗಾಳಿ ಸುದ್ದಿ ರಾಜ್ಯದಾದ್ಯಂತ ಹರಡುತ್ತಿದೆ. ಇದರಿಂದಾಗಿ, ಅಮಾಯಕರ ಮೇಲೆ ಹಲ್ಲೆಗಳು ನಡೆಯುತ್ತಿವೆ. ವದಂತಿಗಳಿಂದ ಹೆದರಿರುವ ಜನ, ಉದ್ದವಾದ ಮೀಸೆ ಹಾಗೂ ಗಡ್ಡ ಬಿಟ್ಟ ಭಿಕ್ಷಕರು, ಮಾನಸಿಕ ಅಸ್ವಸ್ಥರು ಹಾಗೂ ಅಲೆಮಾರಿಗಳನ್ನು ಹಿಡಿದು ಥಳಿಸುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಘಟನೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
'ಮಕ್ಕಳ ಕಳ್ಳರು ಯಾರೂ ಇಲ್ಲ. ಇದು ಕೇವಲ ವದಂತಿ' ಎಂದು ಜಾಗೃತಿ ಮೂಡಿಸುತ್ತಲೇ ಇದ್ದೇವೆ. ಅಷ್ಟಾದರೂ ಜನರಲ್ಲಿ ಅರಿವು ಮೂಡುತ್ತಿಲ್ಲ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರು ಗುಂಪು ಕಟ್ಟಿಕೊಂಡು, ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿದ್ದದ್ದನ್ನು ಕಂಡರೆ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿ ಎಂದು ಪೊಲೀಸರು ಹೇಳಿದರು.
SCROLL FOR NEXT