ರಾಜ್ಯ

ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಯುವಕನ ಮೇಲೆ ಹಲ್ಲೆ, ಕೊಲೆ!

Srinivasamurthy VN
ಬೆಂಗಳೂರು: ಕೆಲಸ ಅರಸಿ ಬಂದಿದ್ದ ಯುವಕನೋರ್ವನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಮನುಷ್ಯತ್ವವನ್ನೇ ಮರೆತ ಬೆಂಗಳೂರು ನಿವಾಸಿಗಳು ಮನಬಂದಂತೆ ಥಳಿಸಿ ಕೊಂದು ಹಾಕಿರುವ ಆತಂಕಕಾರಿ ಘಟನೆ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಪೆನ್‌ಷನ್ ಮೊಹಲ್ಲಾದ ರಸ್ತೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಉದ್ದವಾದ ಕೊದಲು ಹಾಗೂ ಗಡ್ಡ ಬಿಟ್ಟಿದ್ದ ವ್ಯಕ್ತಿಯನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಜನ ಆತನ್ನನು ಹಿಡಿದಿದ್ದಾರೆ. ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆತನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಬೆನ್ನಟ್ಟಿದ್ದರು. ಈ ವೇಳೆ ರಂಗನಾಥ್ ಟಾಕೀಸ್ ಬಳಿ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಲಾಗಿದೆ. 
ಜನರ ಸಾಮೂಹಿಕ ಥಳಿತಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಆತ ತಾನು ಮಕ್ಕಳ ಕಳ್ಳ ಅಲ್ಲ ಎಂದರೂ ಆತನ ಮಾತು ನಂಬದ ಜನ ಮಾನವೀಯತೆಯನ್ನೇ ಮರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನ ಕೈಕಾಲು ಕಟ್ಟಿ ರಸ್ತೆಯಲ್ಲೇ ಎಳೆದಾಡಿದ್ದಾರೆ. ಅಲ್ಲಗೆ ಆತನನ್ನು ಸುತ್ತುವರಿದು ಕಾಲುಗಳಿಂದ ಒದ್ದಿದ್ದಾರೆ. ‘ಮಕ್ಕಳ ಕಳ್ಳ. ಮಕ್ಕಳ ಕಳ್ಳ’ ಎಂದು ಕೂಗಾಡುತ್ತ ಮರದ ದೊಣ್ಣೆ ಹಾಗೂ ಬ್ಯಾಟ್‌ಗಳಿಂದ ಹಲ್ಲೆ ಮಾಡಿದ್ದಾರೆ. ರಕ್ತ ಬರುವವರೆಗೂ ಥಳಿಸಿದ್ದಾರೆ. ಕೈ– ಕಾಲು ಮುಗಿದರೂ ಆತನ್ನು ಬಿಟ್ಟಿರಲಿಲ್ಲ.
ಘಟನೆಯನ್ನು ಕಂಡ ವ್ಯಕ್ತಿಯೊಬ್ಬರು, ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗಲೂ ನಿವಾಸಿಗಳು ಗುಂಪು ಕಟ್ಟಿಕೊಂಡು ಥಳಿಸುತ್ತಿದ್ದರು. ಪೊಲೀಸ್ ಸಿಬ್ಬಂದಿಯನ್ನು ಕಂಡ ಬಳಿಕ ಅಲ್ಲಿದ್ದವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ನರಳುತ್ತ ಬಿದ್ದಿದ್ದ ಕಾಲುರಾಮ್‌ ಅವರನ್ನು ಸಿಬ್ಬಂದಿಯೇ ಹೊಯ್ಸಳ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದರು.
ಇದೀಗ ಆತನ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು, ಸಾರ್ವಜನಿಕರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಕೆಲ ಸಾರ್ವಜನಿಕರಷ್ಟೇ ಕಾಲುರಾಮ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಹೆಸರು ಗೊತ್ತಾದ ನಂತರ, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ಇನ್ನು ಮೃತ ವ್ಯಕ್ತಿಯನ್ನು 26 ವರ್ಷದ ಕಾಲುರಾಮ್‌ ಬಚ್ಚನ್‌ರಾಮ್ ಎಂದು ಗುರುತಿಸಲಾಗಿದ್ದು, ಈತ ರಾಜಸ್ಥಾನದ ನಿವಾಸಿಯಾಗಿದ್ದ. ಉದ್ಯೋಗ ಹುಡುಕಿಕೊಂಡು ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. 
SCROLL FOR NEXT