ಬೆಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ರಾಜಸ್ಥಾನದ ಮೂಲದ ಯುವಕನನ್ನು ಸ್ಥಳೀಯರು ಹೊಡೆದು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಸಿಸಿಟಿವಿ, ಸ್ಥಳೀಯರು ಮತ್ತು ಪ್ರತ್ಯಕ್ಷ ದರ್ಶಿಗಳ ವಿಚಾರಣೆ ನಡೆಸಿದ್ದ ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಅನ್ಬು (26), ವಸಂತ್ ಕುಮಾರ್ (32), ಗೋಪಿ (18), ಬಾಲನ್ (30), ನಂದಾ (20), ತಿರುಮಲೇಶ್ (28), ರಾಜೇಶ್ (18), ಆಂಟನಿ (21), ಅನುಷಾ (30), ಸುಶೀಲಾ (37) , ಇಂದಿರಾ (38), ವಾಣಿ (31) ಎಂದು ಗುರುತಿಸಲಾಗಿದೆ. ಅಂತೆಯೇ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನೂ ಕೂಡ ಬಂಧಿಸಲಾಗಿದ್ದು, ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಅಪ್ಪು ಮತ್ತು ಕಿರಣ್ ಎಂಬುವವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರೆಲ್ಲರೂ ಸ್ಥಳೀಯ ಆನಂದಪುರ, ಫ್ಲವರ್ ಗಾರ್ಡನ್, ಗಿರಿಪುರ ಸ್ಲಂ ನಿವಾಸಿಗಳಾಗಿದ್ದು, ಕೆಲವರು ಪೇಟಿಂಗ್ ಕೆಲಸ, ದಿನಗೂಲಿಗಳು, ತರಕಾರಿ ಮತ್ತು ಹೂವಿನ ಮಾರಾಟಗಾರರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಧ್ಯಮಗಳಲ್ಲಿ ಮತ್ತು ಸ್ಥಳೀಯರು ಚಿತ್ರೀಕರಿಸಿರುವ ಮೊಬೈಲ್ ವಿಡಿಯೋಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವುಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇನ್ನು ಚಾಮರಾಜಪೇಟೆಯಲ್ಲಿ ಸಾಮೂಹಿಕ ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಯುವಕ ಕಾಲುರಾಮ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪುಣೆಯಲ್ಲಿರುವ ಆತನ ಸಹೋದರನ ಕುರಿತು ಮಾಹಿತಿ ಲಭ್ಯವಾಗಿದ್ದು, ಆತನಿಗೆ ಮಾಹಿತಿ ನೀಡಲಾಗಿದೆ. ಆತ ಬೆಂಗಳೂರಿಗೆ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಮರಾಜಪೇಟೆಯ ಜನರ ಕೈಯಲ್ಲಿ ಪ್ರಾಣಬಿಟ್ಟ ವ್ಯಕ್ತಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಆದರೆ, ಇದನ್ನು ವಿರೋಧಿಸಿ, ಆರೋಪಿಗಳ ಸಂಬಂಧಿಕರು ಪೊಲೀಸ್ ಠಾಣೆ ಬಳಿ ಬಂದು ಪ್ರತಿಭಟನೆ ನಡೆಸಿದರು. ಅಪ್ರಾಪ್ತರನ್ನು ವಶಕ್ಕೆ ಪಡೆದು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಮಧ್ಯೆ ನಿಮ್ಮ ಮಕ್ಕಳಿಗೆ ನಾವೇನೂ ಮಾಡಲ್ಲ, ವಿಚಾರಣೆ ನಡೆಸಿ ಬಿಡುತ್ತೇವೆ ಎಂದು ಪೊಲೀಸರು ಹೇಳಿದರೂ ಪ್ರತಿಭಟನೆ ನಿಲ್ಲಿಸದ ಸಂಬಂಧಿಕರು, ಪೊಲೀಸರ ಜೊತೆಯಲ್ಲಿ ವಾಗ್ವಾದಕ್ಕಿಳಿದಿದ್ದರು. ‘ನಮ್ಮ ಮಕ್ಕಳನ್ನು ಯಾಕ್ ಸರ್ ಸುಮ್ನೆ ಕರೆದುಕೊಂಡು ಬಂದಿದ್ದೀರಾ? ಇದೇನಾ ಕಾನೂನು? ನಮಗೆ ಭದ್ರತೆ ಕೊಡುವವರು ಯಾರು? ನಮ್ಮ ಮಕ್ಕಳನ್ನು ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದರಿಂದ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.