ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಹೆಚ್ ಡಿ ಕುಮಾರಸ್ವಾಮಿಗೆ ಸರಣಿ ಸವಾಲು ಎದುರಾಗಿದೆ. ಸಂಪುಟ ರಚನೆ ಸಧ್ಯಕ್ಕೆ ಸಿಎಂ ಮುಂದಿರುವ ದೊಡ್ಡ ಸವಾಲಾಗಿದ್ದರೆ, ರೈತರ ಸಾಲ ಮನ್ನಾ ಹಾಗೂ ಇದಕ್ಕಾಗಿ ಸರ್ಕಾರದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳುವುದು ಹೆಚ್ ಡಿಕೆ ಮುಂದಿರುವ ಮತ್ತೊಂದು ಸವಾಲಾಗಿದೆ.
ರೈತರ ಸಾಲ ಮನ್ನಾ ಮಾಡದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ವಿಪಕ್ಷ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡುವುದರ ಬಗ್ಗೆ ಮೇ.27 ರಂದು ಹೇಳಿಕೆ ನೀಡಿರುವ ಕುಮಾರಸ್ವಾಮಿ, ನಾನು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ, ರೈತರ ಸಾಲ ಮನ್ನಾ ಮಾಡಬೇಕಾದರೆ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನೊಂದಿಗೂ ಚರ್ಚೆ ನಡೆಸಬೇಕಾಗುತ್ತದೆ, ರೈತರ ಸಾಲ ಮನ್ನಾ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ವಾರ ಕಾಲಾವಕಾಶ ನೀಡಿ ಎಂದಿದ್ದಾರೆ.
"ನಾನು ಕುರ್ಚಿಗೆ ಅಂಟಿಕೊಂಡು ಕೂತಿಲ್ಲ, ರೈತರ ಸಾಲ ಮನ್ನಾ ಮಾಡದಿದ್ದರೆ ನಾನೇ ರಾಜೀನಾಮೆ ನೀಡುತ್ತೇನೆ, ಯಾರೂ ಒತ್ತಾಯ ಮಾಡಬೇಕಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.