ಸವಿತಾ ಹಾಲಪ್ಪನವರ್ ತಂದೆ ಅಂದಾನಪ್ಪ ಯಳಗಿ
ಬೆಳಗಾವಿ: ಐರಿಸ್ ಮತದಾರರಿಗೆ ಧನ್ಯವಾದಗಳು, ಅಂತಿಮವಾಗಿ ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ದೊರೆತಿದೆ ಎಂದು 72 ವರ್ಷದ ಅಂದಾನಪ್ಪ ಯಳಗಿ ಹೇಳಿದ್ದಾರೆ.
ಐರ್ಲೆಂಡ್ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರಾಕರಿಸಿದ ನಂತರ ಬೆಳಗಾವಿ ಮೂಲದ ದಂತ ವೈದ್ಯೆ ಡಾ.ಸವಿತಾ ಹಾಲಪ್ಪನವರ್ 2012ರಲ್ಲಿ ಮೃತಪಟ್ಟಿದ್ದರು. ಇವರು ಅಂದಾನೆಪ್ಪ ಅವರ ಮಗಳು.
2012ರಲ್ಲಿ ಬೆಳಗಾವಿಯ ಸವಿತಾ ಹಾಲಪ್ಪನವರ್ ತೀವ್ರ ನೋವಿನಿಂದ ಆಸ್ಪತ್ರೆಗೆ ತೆರಳಿದರು. ಈ ವೇಳೆ, ‘ಗರ್ಭಪಾತವಾಗಲಿದೆ’ ಎಂದು ವೈದ್ಯರು ಹೇಳಿದರಾದರೂ ವೈದ್ಯಕೀಯ ನೆರವು ನೀಡಲು ನಿರಾಕರಿಸಿದರು. ವೈದ್ಯಕೀಯ ಗರ್ಭಪಾತ ನಡೆಸುವುದು ‘ಕಾನೂನಿಗೆ ವಿರುದ್ಧ’ ಎಂದು ತಿರಸ್ಕರಿಸಿದರು. ಹೀಗಾಗಿ, ಸಮರ್ಪಕ ಚಿಕಿತ್ಸೆ ಸಿಗದೆ ದಂತ ವೈದ್ಯೆ ಸವಿತಾ ಸಾವನ್ನಪ್ಪಬೇಕಾದದ್ದು ಆಘಾತಕಾರಿಯಾದುದಾಗಿತ್ತಲ್ಲದೆ ಜನರ ಪ್ರಜ್ಞೆಯನ್ನು ಕಲಕಿತ್ತು.
‘ಕ್ಯಾಥೊಲಿಕ್ ಆಚರಣೆ ಜಾರಿಯಲ್ಲಿರುವ ಕಾರಣ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲ. ಈ ಕಾರಣಕ್ಕೇ ನನ್ನ ಮಗಳು ಮೃತಪಟ್ಟಿದ್ದಳು. ಇದರಿಂದ ಆಕ್ರೋಶಗೊಂಡ ಹಲವು ಸಂಘಟನೆಗಳು ಬೀದಿಗಿಳಿದು ಅಲ್ಲಿ ಪ್ರತಿಭಟನೆ ನಡೆಸಿದ್ದವು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲುಗೊಳಿಸಬೇಕು ಎಂದು ಒತ್ತಾಯಿಸಿದ್ದವು.
ಸವಿತಾ ಸಾವಿನ ನಂತರ ಅಲ್ಲಿನ ಹಲವು ಪತ್ರಕರ್ತರು ಹಾಗೂ ಸಾರ್ವಜನಿಕರು ನಮ್ಮ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡರು. ನಾವು ಅವರಿಗೆ ಎಲ್ಲ ಮಾಹಿತಿ ನೀಡಿದೆವು. ಹೋರಾಟಕ್ಕೆ ಬಲ ತುಂಬಿದೆವು. ಆರು ವರ್ಷ ನಡೆಸಿದ ಹೋರಾಟ ಇಂದು ಜಯ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಸಂತಸವನ್ನು ಹಂಚಿಕೊಳ್ಳಲು ನನಗೆ ಪದಗಳೇ ಸಿಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.