ರಾಜ್ಯ

ಕೇರಳಕ್ಕೆ ಇಂದು ಮುಂಗಾರು ಪ್ರವೇಶ: ಭಾರತೀಯ ಹವಾಮಾನ ಇಲಾಖೆ

Shilpa D
ನವದೆಹಲಿ: ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವಲಂಬಿಸಿರುವ ನೈಋತ್ಯ ಮಾನ್ಸೂನ್‌ ಮಂಗಳವಾರ ಕೇರಳದ ಮೂಲಕ ಭಾರತವನ್ನು ಪ್ರವೇಶಿಸಲಿದೆ.
ಭಾರತೀಯ ಹವಾಮಾನ ಇಲಾಖೆ ಸೋಮವಾರ ಬೆಳಗ್ಗೆ 8.15ಕ್ಕೆ ಪ್ರಕಟಿಸಿದ ಬುಲೆಟಿನ್‌ನಲ್ಲಿ ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಮಾನ್ಸೂನ್‌ ಅಪ್ಪಳಿಸಲಿದೆ ಎಂದು ಹೇಳಿದೆ. ಈ ನಡುವೆ ಖಾಸಗಿ ಸ್ಕೈ ಮೆಟ್‌ ಸಂಸ್ಥೆ ಸೋಮವಾರವೇ ಮಾನ್ಸೂನ್‌ ಪ್ರವೇಶಿಸಲಿದೆ ಎಂದು ಹೇಳಿದೆ. ಎರಡೂ ಸಂಸ್ಥೆಗಳು ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆ ನಡುವೆ ಮಾನ್ಸೂನ್‌ ಪ್ರವೇಶದ ಮುಹೂರ್ತ ಫಿಕ್ಸ್‌ ಮಾಡಿದಂತಾಗಿದೆ. 
ಮುಂಗಾರು ಪ್ರವೇಶವಾಗಿದೆ ಎಂಬುದನ್ನು ಘೋಷಿಸಲು ಬೇಕಿರುವ ಎಲ್ಲ ಮಾನದಂಡಗಳೂ ಪೂರೈಕೆಯಾಗಿವೆ. ಮೇ 10ರ ಬಳಿಕ, ಲಭ್ಯ ಇರುವ 14 ಮಳೆ ಮಾಪನ ಕೇಂದ್ರಗಳ ಪೈಕಿ ಶೇ 60ರಷ್ಟಲ್ಲಿ 2.55 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಾದರೆ ಮುಂಗಾರು ಆರಂಭವಾಗಿದೆ ಎಂದೇ ಅರ್ಥ ಎಂದು ಸ್ಕೈಮೆಟ್‌ ಹೇಳಿದೆ.
ಕೇರಳಕ್ಕೆ ಮುಂಗಾರು ಪ್ರವೇಶವನ್ನು ನಿರ್ಧರಿಸುವ 14 ಮಾಪನ ಕೇಂದ್ರಗಳಲ್ಲಿ ಮಂಗಳೂರು ಕೂಡ ಒಂದು. ಸ್ಕೈಮೆಟ್‌ ಮೇ 28ರಂದು, ಹವಾಮಾನ ಇಲಾಖೆ ಮೇ 29ರಂದು ಮುಂಗಾರು ಪ್ರವೇಶದ ಭವಿಷ್ಯ ನುಡಿದಿದ್ದವು. 
ಭಾರತೀಯ ಹವಾಮಾನ ಇಲಾಖೆ ಮಿನಿ ಕೋಯ್‌, ಅಮಿನಿ, ತಿರುವನಂತಪುರಂ, ಪುನಲೂರು, ಕೊಲ್ಲಂ, ಅಲಪುಳ, ಕೊಟ್ಟಾಯಂ, ಕೊಚ್ಚಿ, ತ್ರಿಶೂರ್‌, ಕಲ್ಲಿಕೋಟೆ, ಕಣ್ಣೂರು, ಕುಡುಲು ಮತ್ತು ಮಂಗಳೂರಿನಲ್ಲಿ ಮಳೆ ಸಂಗ್ರಹ ಕೇಂದ್ರ ಹೊಂದಿದೆ. ಇವುಗಳ ಪೈಕಿ 60 ಶೇಕಡಾ ಕೇಂದ್ರಗಳಲ್ಲಿ ಸತತ ಎರಡು ದಿನಗಳಲ್ಲಿ 2.5 ಮಿ.ಮೀ. ಮಳೆ ಸುರಿದರೆ ಮಾನ್ಸೂನ್‌ ಆಗಮಿಸಿದೆ ಎಂದು ಘೋಷಿಸಲಾಗುತ್ತದೆ. 
SCROLL FOR NEXT