ರಾಜ್ಯ

ಮುಷ್ಕರ ನಡೆಸುವ ನೌಕರರಿಗೆ ಬಿಸಿ ಮುಟ್ಟಿಸಲು ಕೇಂದ್ರ ಮುಂದು; ಮೆಟ್ರೋ ಸೇವೆಗಳನ್ನು ಎಸ್ಮಾ ಅಡಿ ತರಲು ಚಿಂತನೆ?

Manjula VN
ಬೆಂಗಳೂರು: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಪದೇ ಪದೇ ಬೆದರಿಕೆಯೊಡ್ಡುವ ನೌಕರರಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮೆಟ್ರೋ ನೌಕರರಿಗೆ ಎಸ್ಮಾ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಮ್ಮ ಮೆಟ್ರೋ ಸಿಬ್ಬಂದಿ ಜೂ.4 ರಿಂದ ಅನಿರ್ಧಿಷ್ಟಾವಧಿ ಕಾಲ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಅಗತ್ಯ ಸೇವೆಗಳಡಿ ಮೇಟ್ರೋ ಸೇವೆ ಬರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವ ಯಾವುದೇ ಸೇವೆಯನ್ನು ಎಸ್ಮಾ ಕಾಯ್ದೆಯಡಿಯಲ್ಲಿ ತರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. 
ಈ ಹಿನ್ನಲೆಯಲ್ಲಿ ಮೆಟ್ರೋ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್ಮಾ ಕಾಯ್ದೆಯನ್ನು ನೌಕರರ ಪ್ರತಿಭಟನೆ ವೇಳೆ ಜಾರಿಗೊಳಿಸಲು ಮುಂದಾಗಿವೆ. 
ಬಿಎಂಆರ್'ಸಿಎಲ್ ಎಂಡಿ ಮಹೇಂದ್ರ ಜೈನ್ ಅವರು ಮಾತನಾಡಿ, ಮೆಟ್ರೋ ಸೇವೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗಿದೆ. ಮೆಟ್ರೋ ಸೇವೆಗಳನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತರಲುವ ಅಗತ್ಯವಿದೆ. ನಗರದ ಜೀವನದಲ್ಲಿ ಚಲನಶೀಲತೆ ಎಂಬುದು ಅತ್ಯಂತ ಮುಖ್ಯವಾದದ್ದು. ಇಂತಹ ಚಲನಶೀಲತೆಯನ್ನು ಪ್ರತಿಬಂಧಿಸುವ ಶಕ್ತಿಗಳನ್ನು ನಿಯಂತ್ರಸಬೇಕು ಎಂದು ಹೇಳಿದ್ದಾರೆ. 
ಎಸ್ಮಾ (ಅಗತ್ಯ ಸೇವೆ ನಿರ್ವಹಣೆ ಕಾಯ್ದೆ) ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಭಾರತದ ಸಂಸತ್ತಿನ ಒಂದು ಕಾರ್ಯವಾಗಿದೆ. ಸರ್ಕಾರ ನೌಕರರ ಮೇಲೆ ಅಂಕುಶ ಹಾಕುವ ಕಾಯ್ದೆ ಇದಾಗಿದ್ದು, 1968ರಲ್ಲಿ ಜಾರಿಗೆ ತರಲಾಗಿತ್ತು. 
SCROLL FOR NEXT