ಮೈಸೂರು: ಬೆಂಗಳೂರಿನ ವ್ಯಕ್ತಿಯೊಬ್ಬರು ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಮೈಸೂರಿನ ನಂಜುಂಡೇಶ್ವರಿಗೆ ಪೂಜೆ ಸಲ್ಲಿಸಿ ಮರಳುವಾಗ ಮಾರ್ಗ ಮಧ್ಯೆ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರು ಮೂಲದ 34 ವರ್ಷದ ಸತೀಶ್ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಬೆಂಗಳೂರಿನಿಂದ ನಂಜನಗೂಡಿಗೆ ಬಂದು ನಂಜುಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ವಾಪಸ್ ಹೋಗುವಾಗ ದೇವಸ್ಥಾನದ ರಸ್ತೆಯ ಸಮೀಪವಿರುವ ಸೇತುವೆಯ ತಿರುವಿನಲ್ಲಿ ಚಾಲಕ ಸತೀಶ್ ಗೆ ಹೃದಯಾಘಾತವಾಗಿದೆ. ಪರಿಣಾಮ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸತೀಶ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.