ಬೆಂಗಳೂರು: ತಂದೆ-ತಾಯಿ ತಮ್ಮ ಮಕ್ಕಳಿಬ್ಬರನ್ನು ಮನೆಯೊಳಗೆ ಬಿಟ್ಟು ಬಾಗಿಲಿಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ವೇಳೆ, ಮನೆಗೆ ಬೆಂಕಿ ಬಿದ್ದ ಪರಿಣಾಮ ಹೊಗೆಯಿಂದಾಗಿ ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ ಭಾನುವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇವೇಂದ್ರಪ್ಪ ಮತ್ತು ರೂಪಮ್ಮ ದಂಪತಿಯ ಮಕ್ಕಳದಾ ಸೃಜನ್ (5) ಮತ್ತು ಲಕ್ಷ್ಮೀ (2) ಮೃತಪಟ್ಟ ಮಕ್ಕಳಾಗಿದ್ದಾರೆ.
ದೇವೇಂದ್ರಪ್ಪ ಬಸವಾಪುರದ ಸಮೀಪದ ಪ್ಯಾರಡೈಸ್ ಅಪಾರ್ಟ್'ಮೆಂಟ್ ನಲ್ಲಿ ಕಾವಲು ಸಿಬ್ಬಂದಿಯಾಗಿ ಹಾಗೂ ರೂಪಮ್ಮ ಮನೆಗೆಲಸ ಮಾಡುತ್ತಾರೆ. ದಂಪತಿ ಒಂದೇ ಅಪಾರ್ಟ್'ಮೆಂಟ್ ನಲ್ಲಿ ಕೆಲಸ ಮಾಡುವುದರಿಂದ ಅವರು ಉಳಿದುಕೊಳ್ಳಲು ಅಪಾರ್ಟ್'ಮೆಂಟ್'ನ ನೆಲ ಮಹಡಿಯ 20/20 ಅಳತೆಯ ಮನೆ ನೀಡಲಾಗಿತ್ತು. ಹಾಗಾಗಿ ಇಬ್ಬರು ಮಕ್ಕಳನ್ನು ಮನೆಯೊಳಗೆ ಬಿಟ್ಟು ಹೊಗಿನಿಂದ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ರೂಪಮ್ಮ ಭಾನುವಾರ ಬೆಳಿಗ್ಗೆ ಕೆಲಸ ಹೋಗಲು ಅಣಿಯಾಗುವಾಗ ಮಗಳು ಲಕ್ಷ್ಮೀ ಇನ್ನೂ ನಿದ್ರಿಸುತ್ತಿದ್ದಳು. ಮಗ ಸೃಜನ್ ಎಚ್ಚರವಾಗಿದ್ದ. ಕೆಲಸಕ್ಕೆ ತೆರಳುವ ಸಮಯವಾಗಿದ್ದರಿಂದ ಇಬ್ಬರೂ ಮಕ್ಕಳನ್ನು ಎಂದಿನಂತೆ ಮನೆಯ ಒಳಗೆ ಬಿಟ್ಟು ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಇಬ್ಬರು ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
10.30ರ ಸುಮಾರಿಗೆ ರೂಪ ಅವರು ಕೆಲಸಕ್ಕೆ ಹೋಗಿದ್ದಾರೆ. ಕೆಲಸಕ್ಕೆ ಹೋಗುವ ವೇಳೆ ಮನೆಯಿಂದ ಮಕ್ಕಳು ಹೊರಗೆ ಬರಬಾರದೆಂದು ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿ ಹೋಗಿದ್ದಾರೆ. 11.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಿಂದ ಹೊಗೆ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಕೂಡಲೇ ಬಾಗಿಲು ತೆಗೆದು ನೋಡಿದಾಗ ಮಕ್ಕಳು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಮಕ್ಕಳನ್ನು ನಾರಾಯಣ ಹೃದಯಾಲಯಕ್ಕೆ ಕರೆದೊಯ್ದಿದ್ದಾರೆ. ಆದರೆ. ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದಾರೆ.
ಪೋಷಕರು ಕೆಲಸಕ್ಕೆ ಹೋದ ಬಳಿಕ ಆಟವಾಡುತ್ತದ್ದ ಮಕ್ಕಳು ಬೆಂಕಿ ಪೊಟ್ಟಣದಿಂದ ಕಡ್ಡಿ ಗೀರಿರುವ ಸಾಧ್ಯತೆಗಳಿದ್ದು, ಈದರಿಂದಾಗಿ ಬೆಂಕಿ ಹೊತ್ತಿಕೊಂಡು ನೆಲಕ ಮೇಲಿದ್ದ ಪೇಪರ್, ಚಾಪೆ ಹಾಗೂ ಇತರೆ ವಸ್ತುಗಳಿಗೆ ಆವರಿಸಿ ಮನೆಯೊಳಗೆ ಹೊಗೆ ತುಂಬಿಕೊಂಡಿದೆ. ಕಿಟಕಿಗಳು ಮುಚ್ಚಿದ್ದರಿಂದ ಮಕ್ಕಳಿಬ್ಬರಿಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
ಕಿಟಕಿ ಹಾಗೂ ಬಾಗಿಲ ಸಂದಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿರುವ ಕೆಲವರು ಕೂಗಿದ್ದಾರೆ. ಅಷ್ಟರಲ್ಲಿ ಕೆಲಸ ಮುಗಿಸಿ ಮನೆಯತ್ತ ಬರುತ್ತಿದ್ದ ರೂಪ ಅವರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.