ರಾಜ್ಯ

ಬೆಳಗಾವಿಯಲ್ಲಿ ಡಿಜಿಟಲ್ ಬಸ್ ನಿಲ್ದಾಣ, ಟಿವಿ ಜೊತೆಗೆ ಇಂಟರ್ ನೆಟ್!

Nagaraja AB

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಬಸ್ ಗಾಗಿ ಕಾಯುವ ಪ್ರಯಾಣಿಕರು ಇನ್ಮೂಂದೆ  ಜಗತ್ತಿನೆಲ್ಲೆಡೆ ಸಂಪರ್ಕ ಸಾಧಿಸುವಂತಾಗಿದೆ.

ಈ ಡಿಜಿಟಲ್ ಬಸ್ ನಿಲ್ದಾಣದಲ್ಲಿ ಜನರು ಅಂತರ್ಜಾಲ ಜಾಲಾಡಬಹುದಾಗಿದೆ. ಕಾಫಿ ಕುಡಿದು ಟಿವಿ ವೀಕ್ಷಿಸಿ ಎಂಜಯ್ ಮಾಡಬಹುದಾಗಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುತ್ತಿದೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್  ಅವರ ಅನುದಾನದಲ್ಲಿ ವಾಜಪೇಯಿ ಮಾರ್ಗದಲ್ಲಿ ಆರ್ ಪಿಡಿ ವೃತ್ತದ ಬಳಿ ಸುಮಾರು  ಒಂಬತ್ತೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ.  ಇಲ್ಲಿ ಉಚಿತ ವೈ, ಫೈ ವ್ಯವಸ್ಥೆ ಮಾಡಲಾಗಿದೆ. ಏಕಕಾಲದಲ್ಲಿ 40 ಜನರು ವೈಫೈ  ವ್ಯವಸ್ಥೆ ಬಳಸಿಕೊಳ್ಳುವ ಮೂಲಕ ಅಂತರ್ಜಾಲದಲ್ಲಿ ಜಾಲಡಬಹುದಾಗಿದೆ ಎಂದು ಇಂಟರ್ನೆಟ್ ಪೂರೈಕೆ ಸೇವಾ ಕಂಪನಿ ತಿಳಿಸಿದೆ.

ಇಂಟರ್ನೆಟ್  ಸಂಪರ್ಕ ಹೊರತುಪಡಿಸಿದಂತೆ ಬಸ್ ನಿಲ್ದಾಣದ ಎರಡು ಕಡೆಗಳಲ್ಲಿ ಎರಡು ಎಲ್ ಇಡಿ ಟಿವಿಗಳನ್ನು ಹಾಕಲಾಗಿದೆ. ಜನರು ಸುದ್ದಿ ವೀಕ್ಷಿಸಲು ಅನುಕೂಲವಾಗುವಂತೆ ಸ್ಥಳೀಯ ಕೇಬಲ್ ಸೇವಾ ಕಂಪನಿಯಿಂದ ಈ ಟಿವಿಗಳಿಗೆ  ಉಚಿತವಾಗಿ ಕೇಬಲ್ ಅಳವಡಿಸಲಾಗಿದೆ.

ಭದ್ರತೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ. ಆದಾಯ ಉತ್ಪತ್ತಿ ನಿಟ್ಟಿನಲ್ಲಿ ಚಿಕ್ಕದಾದ ಕಾಫಿ ಅಂಗಡಿಯೂ ಇದೆ. ಬಸ್ ನಿಲ್ದಾಣ ಅಭಿವೃದ್ದಿಪಡಿಸಿರುವ ಲೋಕೋಪಯೋಗಿ ಇಲಾಖೆ ಕಾಫಿ ಅಂಗಡಿ ಮಾಲೀಕರಿಂದ ಸಾವಿರ ರೂಪಾಯಿ ಬಾಡಿಗೆ ಪಡೆಯಲಿದೆ.

ಈ ಬಸ್ ನಿಲ್ದಾಣದಲ್ಲಿ ಜಾಹೀರಾತು ಅಳವಡಿಸಲು ಬೆಳಗಾವಿ ಮಹಾನಗರ ಪಾಲಿಕೆಗೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ.ಈ ನಿಲ್ದಾಣಕ್ಕೆ  ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರ ಹೆಸರಿಡಲು ನಿರ್ಧರಿಸಲಾಗಿದೆ.

 ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಪ್ರಯಾಣಿಕರು ಸುಮ್ಮನೆ ಸಮಯ ವ್ಯರ್ಥ ಮಾಡದಂತೆ ಸದ್ಬಳಕೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಈ ಬಸ್ ನಿಲ್ದಾಣ ಸ್ಥಾಪಿಸಲಾಗಿದ್ದು, ಈಗಾಗಲೇ ಇಬ್ಬರಿಗೆ ಕೆಲಸ ನೀಡಲಾಗಿದೆ.  ಉಳಿದ  20 ಕಡೆಗಳಲ್ಲಿ ಇದೇ ರೀತಿಯ ಡಿಜಿಟಲ್ ಬಸ್ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

SCROLL FOR NEXT