ಬೆಂಗಳೂರು: ಕೆಲಸ ಮಾಡುವಾಗ ಸ್ಟೌ ಕ್ರಾಫ್ಟ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ಮಹಿಳೆ ಸೇರಿ 12 ಮಂದಿ ಕಾರ್ಮಿಕರಿಗೆ ಗಾಯವಾಗಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪಿಜೆನ್ ಪ್ರೆಶರ್ ಕುಕ್ಕರ್ ತಯಾರು ಮಾಡುವ ಸ್ಟೌ ಕ್ರಾಫ್ಟ್ ಕಾರ್ಖಾನೆಯ ಆರ್'ಸಿ ಯುನಿಟ್ ಕೊಠಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಟೌ ಕ್ರಾಫ್ಟ್ ಕಾರ್ಖಾನೆಯ ತಯಾರಿಕಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 50 ಮಂದಿ ಯನಿಟ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗ್ಯಾಸ್ ಒತ್ತಡ ಹೆಚ್ಚಾಗಿ ಸೋರಿಕೆಯಾಗಿದೆ.
ಕೂಡಲೇ ಬೆಂಕಿ ಹೊತ್ತುಕೊಂಡಿದೆ. ಘಟನೆಯಲ್ಲಿ ಉಳಿದಂತೆ ಇನ್ನೂ 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಹಾರೋಹಳ್ಳಿಯ ಅರುಣೋದಯ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಸುರಕ್ಷಾತಾ ವಸ್ತುಗಳನ್ನು ಅಳವಡಿಸಿರಲ್ಲ. 2 ವಾರಗಳ ಹಿಂದಷ್ಟೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಖಾನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೂ, ಆಡಳಿತ ಮಂಡಳಿಯವರು ನಿರ್ಲಕ್ಷ್ಯ ತೋರಿದ್ದರು. ಇದೀಗ ಮಾಲೀಕ ರಾಜೇಂದ್ರ ಗಂಡಿ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.