ರಾಜ್ಯ

ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಎಟಿಎಂ ಸೆಕ್ಯುರಿಟಿ ಗಾರ್ಡ್!

Sumana Upadhyaya

ಕೊಪ್ಪಳ: ಕಿತ್ತು ತಿನ್ನುವ ಬಡತನದ ನಡುವೆ ಕೂಡ ಓದಬೇಕೆಂಬ ಹಪಾಹಪಿ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಯುವಕನನ್ನು ಇಂದು ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿದೆ.

ರಾತ್ರಿ ವೇಳೆ ಸಿಂಡಿಕೇಟ್ ಬ್ಯಾಂಕಿನ ಎಟಿಎಂ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ರಮೇಶ್ ಚಲವಾದಿ ಹಗಲು ಕಾಲೇಜಿನಲ್ಲಿ ಓದುತ್ತಾ ಕಳೆದ ಶೈಕ್ಷಣಿಕ ಸಾಲಿನಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದಾರೆ.

ಶಣ್ಮುಗಪ್ಪ ಎಂಬ ಕೂಲಿ ಕಾರ್ಮಿಕನ ಐವರು ಮಕ್ಕಳಲ್ಲಿ ರಮೇಶ್ ಮೊದಲಿಗರು. ಗಂಗಾವತಿ ತಾಲ್ಲೂಕಿನ ಗುಂಡೂರು ಗ್ರಾಮದಲ್ಲಿ ವಾಸ. ಗಂಗಾವತಿಯ ಸಿಂಡಿಕೇಟ್ ಬ್ಯಾಂಕ್ ಎಟಿಎಂನಲ್ಲಿ ರಮೇಶ್ ರಾತ್ರಿ ಪಾಳಿ ಕೆಲಸ ಮಾಡುತ್ತಾರೆ. ಕೆಲಸದ ಜೊತೆ ಓದಬೇಕೆಂಬ ಅದಮ್ಯ ಬಯಕೆಯಿಂದ ಕನ್ನಡ ಸ್ನಾತಕೋತ್ತರ ಪದವಿಗೆ ಗಂಗಾವತಿಯ ಕೊಳ್ಳಿ ನಾಗೇಶ್ವರ ರಾವ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇರಿಕೊಂಡರು. ಪ್ರತಿದಿನ ತರಗತಿಗಳಿಗೆ ಹೋಗಿಬಂದು ರಾತ್ರಿ ಕೆಲಸ ಮಾಡುತ್ತಿದ್ದರು. ಇದೀಗ 2,200ರಲ್ಲಿ 1,734 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಗುಂಡೂರಿನಲ್ಲಿ ಪೂರೈಸಿದ ರಮೇಶ್ ನಂತರ ಎಸ್ಎಸ್ ಎಲ್ ಸಿಯನ್ನು ಹತ್ತಿರದ ಸಿದ್ದಾಪುರ ಗ್ರಾಮದಲ್ಲಿ ಪೂರೈಸಿದರು. ನಂತರ ಕಾಲೇಜಿಗೆ ಗಂಗಾವತಿಯ ಕೊಳ್ಳಿ ನಾಗೇಶ್ವರ್ ರಾವ್ ಕಾಲೇಜಿನಲ್ಲಿ ದಾಖಲಾದರು. ಇದೀಗ ಕನ್ನಡ ಭಾಷೆಯಲ್ಲಿ ಪಿ ಹೆಚ್ ಡಿ ಪದವಿ ಗಳಿಸಿ ಉಪನ್ಯಾಸಕರಾಗಲು ಬಯಸುತ್ತಿದ್ದಾರೆ. ಆರ್ಥಿಕ ಸ್ವಾವಲಂಬನೆಗೆ ಮತ್ತು ಕುಟುಂಬ ಪೋಷಣೆಗೆ ಶಿಕ್ಷಣ ಅತಿ ಮುಖ್ಯ ಎನ್ನುತ್ತಾರೆ ರಮೇಶ್.

SCROLL FOR NEXT