ರಾಜ್ಯ

ಬೆಂಗಳೂರು: ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಸಚಿವ ಪಿಯೂಷ್ ಗೋಯಲ್ ಸೂಚನೆ

Sumana Upadhyaya

ಬೆಂಗಳೂರು: ಬೆಂಗಳೂರು ರೈಲ್ವೆ ವಲಯದ ಈಗಿರುವ ರೈಲು ಸಂಪರ್ಕಜಾಲದಲ್ಲಿ ಹೆಚ್ಚು ಉಪ ನಗರ ರೈಲು ಸೇವೆಗಳನ್ನು ನೀಡುವಂತೆ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳಿಗೆ ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ಉದ್ದೇಶಿತ ಉಪ ನಗರ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುವಂತೆ ಅವರು ಹೇಳಿದ್ದಾರೆ. ಕಳೆದ ಮಂಗಳವಾರ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್, ಬೆಂಗಳೂರು ನಗರಕ್ಕೆ ಉಪನಗರ ರೈಲ್ವೆ ಯೋಜನೆಯನ್ನು ತ್ವರಿತಗೊಳಿಸುವಂತೆ ರೈಲ್ವೆ ಸಚಿವರು ಸೂಚಿಸಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಸಂಪರ್ಕಿಸುವ ಉಪನಗರ ರೈಲ್ವೆ ಸಂಖ್ಯೆಗಳನ್ನು ಹೆಚ್ಚಿಸುವಂತೆ ಕೂಡ ಹೇಳಿದ್ದಾರೆ ಎಂದರು.

ಹೆಚ್ಚುವರಿ ಸೇವೆಯನ್ನು ನೀಡಲಾಗುತ್ತಿದೆಯೇ ಎಂದು ಕೇಳಿದ್ದಕ್ಕೆ ಅದನ್ನು ಸದ್ಯದಲ್ಲಿಯೇ ಗುರುತಿಸಲಾಗುವುದು ಎಂದರು. ಇನ್ನೆರಡು ವಾರಗಳಲ್ಲಿ ಹೆಚ್ಚುವರಿ ಉಪನಗರ ರೈಲು ಸೇವೆಗಳನ್ನು ಆರಂಭಿಸಲಾಗುವುದು. ನಂತರ ರೈಲುಗಳ ಸಂಖ್ಯೆಗಳನ್ನು ಕೂಡ ಹೆಚ್ಚಿಸಲಾಗುವುದು ಎಂದರು.

ಸಚಿವರ ಜೊತೆ ಮಾತುಕತೆ ವೇಳೆ ಉಪಸ್ಥಿತರಿದ್ದ ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿ, ಉಪನಗರ ಸಂಪರ್ಕಜಾಲವನ್ನು ತ್ವರಿತಗೊಳಿಸುವ ಸಾಧ್ಯತಾ ವರದಿಯನ್ನು ಸಚಿವರು ಕೇಳಿದರು. ಸಲಹಾ ಸಂಸ್ಥೆ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ (ರೈಟ್ಸ್) ತಯಾರಿಸಿದ ವರದಿ ಅಕ್ಟೋಬರ್ ಕೊನೆಯ ವೇಳೆಗೆ ತಯಾರಾಗಬೇಕಿತ್ತು, ಅದು ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ ಎಂದರು.

ಬೆಂಗಳೂರು ನಗರಕ್ಕೆ 142 ಕಿಲೋ ಮೀಟರ್ ಉದ್ದದ ಹೊಸ ಉಪನಗರ ರೈಲು ಸಂಪರ್ಕದಲ್ಲಿ 72 ಕಿಲೋ ಮೀಟರ್ ಉದ್ದದ ಎಲೆವೇಟೆಡ್ ಕಾರಿಡಾರ್ ನ್ನು ಹೊಂದಿದೆ. 161 ಕಿಲೋ ಮೀಟರ್ ಸಂಪರ್ಕ ವ್ಯಾಪ್ತಿಗೆ 17 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಾಗುತ್ತಿದೆ ಎಂದರು.
 

SCROLL FOR NEXT